ಅತ್ತ ಜನವರಿ 22ರಂದು ಶ್ರೀ ರಾಮಜನ್ಮಭೂಮಿಯಾದ ಅಯೋಧ್ಯೆಯಲ್ಲಿ ಜನವರಿ 22ರಂದು ಪ್ರಾಣಪ್ರತಿಷ್ಠೆ ನಡೆಯಲು ಸಕಲ ಸಿದ್ಧತೆಗಳು ನಡೆಯುತ್ತಿದ್ದರೆ, ಇತ್ತ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಜಿಲ್ಲೆಯ ಜೀವನದಿ ನೇತ್ರಾವತಿ ನದಿ ಮಧ್ಯೆ ಈ ಪ್ರಯುಕ್ತ ಮುನ್ನಾದಿನ ರಾತ್ರಿ ಶ್ರೀ ಸತ್ಯನಾರಾಯಣ ಪೂಜೆ ನಡೆಸಲು ರಾಮಭಕ್ತರೊಬ್ಬರು ಸಿದ್ಧತೆ ನಡೆಸುತ್ತಿದ್ದಾರೆ. ಬಂಟ್ವಾಳ ಪುರಸಭೆಯ ಹಿರಿಯ ಸದಸ್ಯ ಹಾಗೂ ಅಯೋಧ್ಯೆ ಕರಸೇವೆಯಲ್ಲಿ ಎರಡು ಬಾರಿ ಪಾಲ್ಗೊಂಡಿದ್ದ ಎ.ಗೋವಿಂದ ಪ್ರಭು ಅವರು ಈ ತಯಾರಿ ನಡೆಸುತ್ತಿರುವವರು.
ಅಯೋಧ್ಯೆ ಕರಸೇವೆಯಲ್ಲಿ ಎರಡು ಬಾರಿ ಪಾಲ್ಗೊಂಡಿದ್ದರೂ ಪ್ರಸ್ತುತ ಅಯೋಧ್ಯೆ ನೂತನ ಮಂದಿರದಲ್ಲಿ ಜ. 22ರಂದು ಶ್ರೀರಾಮನ ಪ್ರಾಣ ಪ್ರತಿಷ್ಠೆಯ ಸಂದರ್ಭ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಬಂಟ್ವಾಳದ ಗೋವಿಂದ ಪ್ರಭು ನೇತ್ರಾವತಿ ನದಿಯ ನೀರಿನ ಮಧ್ಯೆ ಶ್ರೀ ಸತ್ಯನಾರಾಯಣ ಪೂಜೆ ನಡೆಸುವುದಕ್ಕೆ ಸಿದ್ಧತೆ ನಡೆಸಿದ್ದಾರೆ.
ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದ ಬಳಿಯ ನೇತ್ರಾವತಿ ನದಿಯಲ್ಲಿ ಜ. 21ರ ರಾತ್ರಿ 7ರ ಬಳಿಕ ಈ ಪೂಜಾ ವಿಧಿಗಳು ನಡೆಯಲಿವೆ. ನದಿಯ ನೀರಿನ ಮಧ್ಯೆ ತೆಪ್ಪದ ಮಾದರಿಯನ್ನು ರಚಿಸಿ ದೀಪಾರಾಧನೆಯ ಬೆಳಕಿನಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿದೆ. ಬಂಟ್ವಾಳ ಪುರಸಭಾ ಸದಸ್ಯ ಎ.ಗೋವಿಂದ ಪ್ರಭು ಕಾರ್ಯಕ್ರಮದ ನೇತೃತ್ವ ವಹಿಸಿ ತಮ್ಮ, ಖರ್ಚಿನಲ್ಲಿ ಈ ಕಾರ್ಯಕ್ರಮವನ್ನು ನಡೆಸಲಿದ್ದಾರೆ.
ಶ್ರೀರಾಮನ ವಿಗ್ರಹ ಆಕರ್ಷಣೆ:
ಜ. 22ರಂದು ದೇವಸ್ಥಾನದಲ್ಲೇ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಹೀಗಾಗಿ ಅದರ ಮುಂಚಿನ ರಾತ್ರಿ ಈ ಕಾರ್ಯಕ್ರಮ ಆಯೋಜನೆಗೊಂಡಿದೆ. ಪೂಜೆ ನಡೆಯುವ ಪಕ್ಕದಲ್ಲೇ ನದಿಯಲ್ಲಿ ಶ್ರೀರಾಮನ ವಿಗ್ರಹ, ಆಂಜನೇಯನ ವಿಗ್ರಹಗಳು ಕೂಡ ಆಕರ್ಷಕವಾಗಿ ನಿರ್ಮಾಣಗೊಳ್ಳಲಿವೆ.
ಕಾರ್ಯಕ್ರಮದಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಅವರಿಗಾಗಿ ದೇವಸ್ಥಾನ ಆವರಣದಲ್ಲಿ ನದಿ ಕಿನಾರೆಯ ಮೆಟ್ಟಿಲುಗಳಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಇರುತ್ತದೆ. ಪೂಜೆಯ ಬಳಿಕ ಎಲ್ಲರೂ ನದಿಯ ಮಧ್ಯೆ ಪೂಜೆ ನಡೆಯುವ ಜಾಗಕ್ಕೆ ಬಂದು ಪ್ರಸಾದ ತೆಗೆದುಕೊಳ್ಳುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಭಕ್ತರಿಗೆ ಉಪಾಹಾರದ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ನೇತ್ರಾವತಿ ನದಿಯಲ್ಲಿ ತುಂಬೆ ಡ್ಯಾಮ್‌ನ ಹಿನ್ನೀರು ಹೆಚ್ಚಿನ ಪ್ರಮಾಣದಲ್ಲಿ ನೀರಿನ ರಾಶಿ ಇದ್ದು, ವಿದ್ಯುತ್ ದೀಪದ ಬೆಳಕಿನ ಜತೆಗೆ ಹಣತೆಯ ಬೆಳಕು ಕೂಡ ಗಮನ ಸೆಳೆಯಲಿವೆ. ಈಗಾಗಲೇ ನದಿಯ ಮಧ್ಯೆ ಸ್ಟೇಜ್ ರೀತಿಯ ಮಾದರಿ ರಚನೆಗೊಂಡಿದ್ದು, ಉಳಿದಂತೆ ಎಲ್ಲಾ ಸಿದ್ಧತೆಗಳು ಆಗುತ್ತಿವೆ. 1992ರ ಕಾಲಘಟ್ಟದಲ್ಲಿ ಅಯೋಧ್ಯೆ ಕರಸೇವೆಯಲ್ಲಿ ನಾವು ಸುಮಾರು 40 ಮಂದಿಯಷ್ಟು ಬಂಟ್ವಾಳದಿಂದ ಭಾಗವಹಿಸಿದ್ದೇವೆ. ನಾನು 2 ಬಾರಿ ತೆರಳಿದ್ದು, ಬದುಕಿ ಬಂದದ್ದೇ ವಿಶೇಷ. ಹೀಗಾಗಿ ಈಗ ಪ್ರತಿಷ್ಠೆಯ ಸಂದರ್ಭ ಪಾಲ್ಗೊಳ್ಳಲು ಅವಕಾಶ ಇಲ್ಲದೇ ಇರುವುದರಿಂದ ಸರಯೂ ನದಿಯಷ್ಟೇ ಪವಿತ್ರವಾಗಿರುವ ನೇತ್ರಾವತಿ ನದಿಯಲ್ಲಿ ಶ್ರೀ ಸತ್ಯನಾರಾಯಣ ಪೂಜೆಗೆ ಸಿದ್ಧತೆ ನಡೆಸಿದ್ದೇನೆ ಎಂದು ಈ ಸಂದರ್ಭ ಮಾಧ್ಯಮಗಳಿಗೆ ಗೋವಿಂದ ಪ್ರಭು ತಿಳಿಸಿದ್ದಾರೆ.