ಇಲ್ಲಿನ ರಾಯಿ-ಕೊಯಿಲ ಹಿಂದೂ ಧರ್ಮೋತ್ಥಾನ ಚಾರಿಟೇಬಲ್ ಟ್ರಸ್ಟ್ ನೇತೃತ್ವ ಮತ್ತು ಹಿಂದೂ ಧರ್ಮೋತ್ಥಾನ ವೇದಿಕೆ ಟ್ರಸ್ಟ್ ಸಹಭಾಗಿತ್ವದಲ್ಲಿ ಕೊಯಿಲ ಹನುಮಾನ್ ನಗರ ಎಂಬಲ್ಲಿ ಅಯೋಧ್ಯೆ ಶ್ರೀರಾಮ ಮಂದಿರ ಲೋಕಾರ್ಪಣೆ ಪ್ರಯುಕ್ತ ಇದೇ ೧೪ ರಂದು ಬೆಳಿಗ್ಗೆ ಗಂಟೆ ೭.೩೦ರಿಂದ ಮಧ್ಯಾಹ್ನ ೧೨ ಗಂಟೆತನಕ ’ಮಹಾ ಚಂಡಿಕಾಯಾಗ’ ಮತ್ತು ರಾಮತಾರಕ ಮಂತ್ರ ಹೋಮ’ ನಡೆಯಲಿದೆ. ಅಂದು ರಾತ್ರಿ ೮.೩೦ ಗಂಟೆಗೆ ಕಟೀಲು ಮೇಳದಿಂದ ’ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಅಂದು ಮಧ್ಯಾಹ್ನ ೧೨ ಗಂಟೆಗೆ ಸಂಸದ ನಳಿನ್ ಕುಮಾರ್ ಕಟೀಲು ಅಧ್ಯಕ್ಷತೆಯಲ್ಲಿ ನಡೆಯುವ ಧಾರ್ಮಿಕ ಸಭೆಯಲ್ಲಿ ಹಾರಿಕಾ ಮಂಜುನಾಥ್ ಬೆಂಗಳೂರು ಇವರು ಧಾರ್ಮಿಕ ಉಪನ್ಯಾಸ ನೀಡಲಿದ್ದು, ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಸುದರ್ಶನ್ ಮೂಡುಬಿದ್ರೆ, ಜಿಲ್ಲಾ ಹಾಲು ಒಕ್ಕೂಟ ಅಧ್ಯಕ್ಷ ಸುಚರಿತ ಶೆಟ್ಟಿ, ಚಿತ್ರ ನಟ ಅರವಿಂದ ಬೋಳಾರ್ ಮತ್ತಿತರ ಗಣ್ಯರು ಭಾಗವಹಿಸುವರು.
ಇದೇ ವೇಳೆ ದೈವ ಪರಿಚಾರಕ ಉಮೇಶ ಡಿ.ಎಂ.ಅರಳ, ಅಂತರ್ ರಾಷ್ಟ್ರೀಯ ಕ್ರೀಡಾಪಟು ತೀರ್ಥೇಶ್ ಶೆಟ್ಟಿ ಕೊಯಿಲ, ಹಿನ್ನೆಲೆ ಗಾಯಕಿ ನಂದಿನಿ ಗಾಣಿಗ ರಾಯಿ ಇವರಿಗೆ ಸನ್ಮಾನ ನಡೆಯಲಿದೆ.
ವಿಶೇಷ ಆಕರ್ಷಣೆಗಾಗಿ ಸ್ಥಳೀಯ ಬದನಡಿ ಓಂ ಫ್ರೆಂಡ್ಸ್ ಸಂಘಟನೆ ನೆರವಿನಲ್ಲಿ ಇದೇ ೧೩ರಂದು ರಾತ್ರಿ ಹೊನಲು ಬೆಳಕಿನ ರಾಜ್ಯಮಟ್ಟದ ’ಹಗ್ಗ ಜಗ್ಗಾಟ’ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಸಮಿತಿ ಸಂಚಾಲಕ ವಸಂತ ಕುಮಾರ್ ಅಣ್ಣಳಿಕೆ ಮತ್ತು ಸಮಿತಿ ಅಧ್ಯಕ್ಷ ಪ್ರವೀಣ ಅಂಚನ್ ಕೊಯಿಲ ತಿಳಿಸಿದ್ದಾರೆ.