ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಗ್ಗ ಸಮೀಪ ಸಾಲುಮರದ ಟ್ರೀಪಾರ್ಕ್ ಮುಂಭಾಗದಲ್ಲಿ ಇರುವ ಮನೆಯೊಂದಕ್ಕೆ ಬೆಳಗ್ಗೆ ಪ್ರವೇಶಿಸಿದ ನಾಲ್ವರು ಮುಸುಕುಧಾರಿಗಳು, ಮನೆಯಲ್ಲಿದ್ದ ಮಹಿಳೆಯರನ್ನು ಬೆದರಿಸಿ, ಬಂಗಾರ, ನಗದು ಸಹಿತ ಸುಮಾರು 3 ಲಕ್ಷ ರೂಗೂ ಅಧಿಕ ಮೌಲ್ಯದ ಸೊತ್ತುಗಳನ್ನು ದೋಚಿದ್ದಾರೆ.
ಹೆದ್ದಾರಿ ಬಳಿ ಇರುವ ಮನೆಯಿಂದ ಈ ರೀತಿಯಾಗಿ ದರೋಡೆ ಮಾಡುವ ಕೃತ್ಯ ಪರಿಸರದಲ್ಲಿ ಹೊಸದಾಗಿದ್ದು, ಸ್ಥಳೀಯರಲ್ಲಿ ಭೀತಿ ಮೂಡಿಸಿದೆ. ಬಂಟ್ವಾಳ ಪರಿಸರದಲ್ಲಿ ಕಳವು ಕೃತ್ಯಗಳು ಈಗಾಗಲೇ ಜಾಸ್ತಿಯಾಗುತ್ತಿದ್ದು, ಪಿಕ್ ಪಾಕೆಟ್ ನಂಥ ಕೃತ್ಯಗಳೂ ನಡೆಯುತ್ತಿವೆ. ಇದೀಗ ಮನೆಗೇ ನುಗ್ಗಿ ಬೆದರಿಸಿ, ದರೋಡೆ ಮಾಡುವ ಕೃತ್ಯ ನಡೆದಿದ್ದು, ಸ್ಥಳೀಯರಲ್ಲಿ ಭೀತಿ ಮನೆಮಾಡಿದೆ.
ಫ್ಲೋರಿನ್ ಪಿಂಟೋ ಮತ್ತು ಅವರ ಮಗಳು ಮರಿನಾ ಪಿಂಟೋ ಮಾತ್ರ ಈ ಮನೆಯಲ್ಲಿದ್ದರು. ಹೊಸದಾಗಿ ಕಟ್ಟಿಸಿದ ಮನೆ ಇದಾಗಿದ್ದು, ಇಲ್ಲಿಗೆ ಬೆಳಗ್ಗೆ ಸುಮಾರು 6.30ರ ವೇಳೆಗೆ ನಾಲ್ವರು ಮುಸುಕುಧಾರಿಗಳು ಕಾಲಿಂಗ್ ಬೆಲ್ ಒತ್ತಿದ್ದಾರೆ. ಇದರ ಅರಿವಿಲ್ಲದ ಮನೆಯವರು ಬಾಗಿಲು ತೆಗೆದಾಗ ಕೃತ್ಯ ನಡೆದಿದೆ. ಗೊದ್ರೇಜ್ ನಲ್ಲಿರಿಸಲಾಗಿದ್ದ ಸುಮಾರು 2.90 ಲಕ್ಷ ರೂಮೌಲ್ಯದ ವಿವಿಧ ಬಂಗಾರಗಳು, 30 ಸಾವಿರನಗದು ಹಾಗೂ ಒಂದು ಮೊಬೈಲ್ ಪೋನ್ ಒಟ್ಟು ಮೂರು ಲಕ್ಷಕ್ಕೂ ಅಧಿಕ ಮೌಲ್ಯದ ನಗನಗದನ್ನು ಕಳ್ಳರು ದೋಚಿದ್ದಾರೆ. ಕರೆಗಂಟೆ ಸದ್ದು ಕೇಳಿ ಬಾಗಿಲು ತೆಗದು ನೋಡಿದಾಗ ನಾಲ್ವರು ಮುಸುಕುದಾರಿಗಳು ಇದ್ದು, ಅವರು ಮನೆಯೊಳಗೆ ನುಗ್ಗಿದ್ದಾರೆ. ಬಳಿಕ ಮನೆಯಲ್ಲಿರುವ ನಗನಗದು ಕೊಡುವಂತೆ ಬೆದರಿಸಿದ್ದಾರೆ. ಬೆದರಿಕೆಗೆ ಬಗ್ಗದಾಗ ನಾಲ್ವರು ಕೈಯಲ್ಲಿ ಚೂರಿ ತೋರಿಸಿ ಕೊಲ್ಲುವ ಬೆದರಿಕೆ ಒಡ್ಡಿದ್ದಾರೆ. ಈ ಸಂದರ್ಭ ಮನೆಯವರು ಗೊದ್ರೇಜ್ ನ ಬೀಗದ ಕೀ ನೀಡಿದ್ದಾರೆ. ಬಂಗಾರವನ್ನು ದೋಚುವ ವೇಳೆ ಅಡ್ಡ ಬಂದ ಮಗಳು ಮರೀನಾ ಪಿಂಟೋ ಅವರ ಕೈಗೆ ಗಾಯವಾಗಿದೆ . ಕಳೆದ ಎರಡು ದಿನಗಳ ಹಿಂದೆ ಇಲ್ಲಿನ ಅಂಗಡಿಯಿಂದ ಜ್ಯೂಸ್ ಮೆಷಿನ್ ಒಂದನ್ನು ಕಳವು ಮಾಡಲಾಗಿತ್ತು. ಸ್ಥಳಕ್ಕೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್, ಎಸ್.ಐ.ಹರೀಶ್ ಬೇಟಿ ನೀಡಿದ್ದಾರೆ. ಹಾಗೂ ಶ್ವಾನ ದಳ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ