ಶ್ರೀದೇವಿ ನೃತ್ಯಾರಾಧನಾ ಕಲಾ ಕೇಂದ್ರ (ರಿ) ಪುತ್ತೂರು ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಕಾರದೊಂದಿಗೆ ನೃತ್ಯಧಾರ ಮತ್ತು ಕಲಾನಯನ ಪ್ರಶಸ್ತಿ ಪ್ರದಾನ ಸಮಾರಂಭ ಬಂಟ್ಚಾಳದ ಸ್ಪರ್ಶ ಕಲಾ ಮಂದಿರದಲ್ಲಿ ಭಾನುವಾರ ಸಂಜೆ ನಡೆಯಿತು.
ಖ್ಯಾತ ಯಕ್ಷಗಾನ ಹಾಸ್ಯ ಕಲಾವಿದ ರಸಿಕರತ್ನ ದಿ ನಯನಕುಮಾರ ಸ್ಮರಣಾರ್ಥ ಕಲಾನಯನ ಪ್ರಶಸ್ತಿಯನ್ನು ರಾಜರತ್ನಂ ದೇವಾಡಿಗ ಅವರಿಗೆ ನೀಡಿ ಗೌರವಿಸಲಾಯಿತು. ದ.ಕ.ಜಿಲ್ಲೆಯ ಪ್ರಮುಖ ನೃತ್ಯ ವಸ್ತ್ರವಿನ್ಯಾಸಕ ಸುನೀಲ್ ಉಚ್ಚಿಲ್ ಮತ್ತು ಸುಜಾತಾ ದಂಪತಿಯನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಮಾತನಾಡಿದ ರಾಜರತ್ನಂ ದೇವಾಡಿಗ, ಇಂದು ಪ್ರಶಸ್ತಿಗಳು ಹಾಗೂ ಡಾಕ್ಟರೇಟ್ ಗಳು ಮಾರಾಟದ ಸರಕಾಗುತ್ತಿರುವ ಹೊತ್ತಿನಲ್ಲಿ ನೈಜವಾಗಿ ದುಡಿಯುವವರಿಗೆ ಸನ್ಮಾನ, ಸತ್ಕಾರಗಳು ಮತ್ತಷ್ಟು ತೊಡಗಿಸಿಕೊಳ್ಳಲು ಪ್ರೇರೇಪಣೆ ನೀಡುತ್ತದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಸುರತ್ಕಲ್ ನ್ಯಾಟ್ಯಾಂಜಲಿ ಕಲಾ ಅಕಾಡೆಮಿಯ ನಿರ್ದೇಶಕರಾದ ಕರ್ನಾಟಕ ಕಲಾಶ್ರೀ ಚಂದ್ರಶೇಖರ ನಾವಡ ಮಾತನಾಡಿ, ಭರತನಾಟ್ಯ ಸಹಿತ ಭಾರತೀಯ ಕಲಾಪ್ರಕಾರಗಳನ್ನು ತಿಳಿದವರು, ಭಾರತೀಯ ಸಂಸ್ಕೃತಿಯನ್ನೂ ಉಳಿಸಿ ಬೆಳೆಸುತ್ತಾರೆ. ಕಲಾ ಸಂಸ್ಕಾರ ಹೇಳಿಕೊಡುವ ಸಂಸ್ಥೆಗಳು ನಮ್ಮ ಮನಸ್ಸು ಅರಳಿಸುತ್ತವೆ ಮಕ್ಕಳಿಗೆ ಶಾಸ್ತ್ರೀಯ ಕಲೆಗಳನ್ನು ಕಲಿಸಿದರೆ, ಸಂಸ್ಕಾರ ಉಳಿಯುತ್ತದೆ ಎಂದರು.
ಅತಿಥಿಯಾಗಿ ಮಾತನಾಡಿದ ತುಳುವೆರೆ ಜನಪದ ಕೂಟ ಕೊಡಗು ಜಿಲ್ಲಾ ಖಜಾಂಚಿ ಉದ್ಯಮಿ ಪ್ರಭು ರೈ ಮಾತನಾಡಿ, ಕಾರ್ಯಕ್ರಮ ಅರ್ಥಪೂರ್ಣವಾಗಿದ್ದು, ಕಲಾಪ್ರತಿಭೆ ಗುರುತಿಸುವ ಕೆಲಸ ದೊಡ್ಡ ಸಾಧನೆ ಎಂದರು.
ನೃತ್ಯ ನಿರ್ದೇಶಕಿ ರೋಹಿಣಿ ಉದಯ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಚಾಲಕ ಉದಯ ವೆಂಕಟೇಶ ಭಟ್ ಸ್ವಾಗತಿಸಿದರು. ಕೇಂದ್ರದ ಅಧ್ಯಕ್ಷ ಬಾಲಕೃಷ್ಣ ಪ್ರಭು ಉಪಸ್ಥಿತರಿದ್ದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಕೇಂದ್ರದ ವಿದ್ಯಾರ್ಥಿಗಳಿಂದ ನೃತ್ಯಪ್ರದರ್ಶನ ನಡೆಯಿತು.