ಗೂಗಲ್ ಮ್ಯಾಪ್ ಹಾಕಿ ಸಂಚರಿಸುವ ಸಂದರ್ಭ ತೋರಿಸಿದ ದಾರಿಯಲ್ಲಿ ಸಾಗಿದ ಘನಗಾತ್ರದ ಲಾರಿಯೊಂದು ಮೊಡಂಕಾಪು ರೈಲ್ವೆ ಮೇಲ್ಸೇತುವೆಯಡಿ ಸಿಲುಕಿಕೊಂಡ ಘಟನೆ ಶನಿವಾರ ನಡೆದಿದೆ. ಬಳಿಕ ಬಂಟ್ವಾಳದ ಮೆಲ್ಕಾರ್ ನಲ್ಲಿರುವ ಟ್ರಾಫಿಕ್ ಠಾಣಾ ಪೊಲೀಸರು ಸುಗಮ ವಾಹನ ಸಂಚಾರಕ್ಕೆ ಅನುವುಮಾಡಿಕೊಟ್ಟರು.
ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಕೆಮಿಕಲ್ ತುಂಬಿದ ಬ್ಯಾರಲ್ ಗಳನ್ನು ಸಾಗಿಸುತ್ತಿದ್ದ ದೊಡ್ಡ ಟ್ರಕ್ ಮಾದರಿಯ ಘನಗಾತ್ರದ ಲಾರಿಯ ಚಾಲಕ ಗೂಗಲ್ ಮ್ಯಾಪ್ ಹಾಕಿದ್ದರು. ಈ ಸಂದರ್ಭ ಯಾವುದೋ ಸಂದರ್ಭ ರೂಟ್ ಪೊಳಲಿ ಮಾರ್ಗದತ್ತ ತೋರಿಸಿತು.
ಬಿ.ಸಿ.ರೋಡ್ ಕಳೆದು, ಹೆದ್ದಾರಿಯಿಂದ ಪೊಳಲಿ ದ್ವಾರದತ್ತ ಪಥ ಬದಲಾಯಿಸಿದ ಚಾಲಕ ನೇರವಾಗಿ ಸಣ್ಣ ಮಾರ್ಗದಲ್ಲಿ ಮುಂದೆ ಹೋದಾಗ, ಘನ ಗಾತ್ರದ ವಾಹನಗಳು ಹೋಗಬಾರದು ಎಂದು ರೈಲ್ವೆ ಸೇತುವೆಯಡಿ ಕಬ್ಬಿಣದ ರಾಡ್ ಹಾಕಿದ್ದು ಕಂಡು ಕಕ್ಕಾಬಿಕ್ಕಿಯಾಗಿದ್ದಾನೆ.
ಇದೇ ಮೊದಲ ಬಾರಿ ಬಂದ ಲಾರಿ ಚಾಲಕ ಮ್ಯಾಪ್ ತೋರಿಸಿದ ಜಾಗಕ್ಕೆ ಹೋಗಿ ಸಮಸ್ಯೆ ಅನುಭವಿಸಿದ್ದಾನೆ. ಘಟನೆಯಿಂದ ಕೆಲ ಕಾಲ ಸಂಚಾರಕ್ಕೆ ಅಡಚಣೆ ಉಂಟಾಯಿತು. ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಮೆಲ್ಕಾರ್ ಟ್ರಾಫಿಕ್ ಠಾಣಾ ಎಎಸ್ಸೈ ಸುರೇಶ್ ಪಡಾರ್, ಸಂಚಾರಕ್ಕೆ ತೊಂದರೆ ಆಗಬಾರದು ಎಂಬ ನಿಟ್ಟಿನಲ್ಲಿ ಕ್ರೇನ್ ತರಿಸಿ ಲಾರಿಯನ್ನು ಬದಿಗೆ ತರಿಸಿದರು.