ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಜ. 19ರಂದು ಬಿ.ಸಿ.ರೋಡಿನಿಂದ ಮೆರವಣಿಗೆಯ ನಡೆಯುವ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆಯ ಸಮಾಲೋಚನಾ ಸಭೆ ಬಿ.ಸಿ.ರೋಡಿನ ಹೋಟೆಲ್ ರಂಗೋಲಿ ಸಭಾಂಗಣದಲ್ಲಿ ನಡೆಯಿತು.
ಸಭೆಯನ್ನುದ್ದೇಶಿಸಿ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ಮಾತನಾಡಿ, ಕ್ಷೇತ್ರದ ಬ್ರಹ್ಮಕಲಶದ ಸಂದರ್ಭ ಹೊರೆಕಾಣಿಕೆಯ ಮೂಲಕವೇ ಬಂದ ಸುವಸ್ತಗಳಿಂದಲೇ ಭಕ್ತರಿಗೆ ಅನ್ನಪ್ರಸಾದ ನೀಡುವ ಕಾರ್ಯ ನಡೆಯಬೇಕಿದ್ದು, ಈ ಹಿನ್ನೆಲೆಯಲ್ಲಿ ನಾವು ಹೆಚ್ಚಿನ ಪ್ರಮಾಣದ ಹೊರೆಕಾಣಿಕೆ ಸಮರ್ಪಣೆಗೆ ಪ್ರಯತ್ನಿಸಬೇಕು. ಅಯೋಧ್ಯೆಯಲ್ಲಿ ಶ್ರೀರಾಮ ಪ್ರತಿಷ್ಠೆಯ ದಿನವೇ ಸರಪಾಡಿಯಲ್ಲೂ ದೇವರ ಪ್ರತಿಷ್ಠೆ ನಡೆಯುವುದು ಸುಯೋಗ ಎಂದರು.
ಬಂಟ್ವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಡಿ.ಶೆಟ್ಟಿ ಮಾತನಾಡಿ, ಭಕ್ತರು ಹೊರೆಕಾಣಿಕೆ ನೀಡುವ ಸಂದರ್ಭ ಯಾವ ಬ್ರಾಂಡಿನ ಅಕ್ಕಿ ನೀಡಬೇಕು, ಯಾವ ಬಗೆಯ ತರಕಾರಿ, ಹಾಳೆ ತಟ್ಟೆ, ಬಾಳೆ ಎಲೆ ಇತರ ವಸ್ತುಗಳು ಯಾವುದು ಬೇಕು ಎಂಬುದನ್ನು ಮೊದಲೇ ತಿಳಿಸಿದಲ್ಲಿ ಅನುಕೂಲವಾಗುತ್ತದೆ. ಜತೆಗೆ ಸುತ್ತಮುತ್ತಲ ದೇವಸ್ಥಾನ, ದೈವಸ್ಥಾನ, ಭಜನಾ ಮಂದಿರ, ಸಂಘ ಸಂಸ್ಥೆಗಳಿಗೆ ಮನವಿ ಮಾಡಿ ಅಲ್ಲಿಂದ ಹೊರೆಕಾಣಿಕೆ ಸಂದಾಯವಾಗಲು ಪ್ರಯತ್ನಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಂ.ಎಸ್.ಶೆಟ್ಟಿ ಸರಪಾಡಿ ಮಾತನಾಡಿ, ಬಲಿಷ್ಠವಾದ ಹೊರೆಕಾಣಿಕೆ ತಂಡದೊಂದಿಗೆ ಯಶಸ್ವಿ ಮೆರವಣಿಗೆ ನಡೆಯಲಿದೆ ಎಂದರು. ಹೊರೆಕಾಣಿಕೆ ಸಮಿತಿ ಸಂಚಾಲಕ ಬಿ.ಸಂಜೀವ ಪೂಜಾರಿ, ಸಹಸಂಚಾಲಕರಾದ ಬಿ.ದೇವದಾಸ್ ಶೆಟ್ಟಿ, ರವಿ ಕಕ್ಯಪದವು ಮಾತನಾಡಿ, ಪ್ರತಿ ಸಮಿತಿಗಳು ಕೂಡ ಜತೆ ಸೇರಿ ಹೊರೆಕಾಣಿಕೆಯನ್ನು ಯಶಸ್ವಿಗೊಳಿಸಬೇಕು ಎಂದರು.
ಹೊರೆಕಾಣಿಕೆ ಸಮಿತಿ ಸಹಸಂಚಾಲಕರಾದ ರವಿ ಕಕ್ಯಪದವು, ಪುರುಷೋತ್ತಮ ಪೂಜಾರಿ ಕಾಯರ್‌ಪಲ್ಕೆ, ಮೊಕ್ತೇಸರರಾದ ವಿಠಲ ಎಂ.ಆರುಮುಡಿ, ಉಮೇಶ್ ಆಳ್ವ ಕೊಟ್ಟುಂಜ, ಪ್ರಮುಖರಾದ ಚಂದ್ರಹಾಸ ರೈ ಬಾಲಜಿಬೈಲು, ಪ್ರಕಾಶ್ ಶೆಟ್ಟಿ ತುಂಬೆ, ಜಗನ್ನಾಥ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.ಬ್ರಹ್ಮಕಲಶ ಸಮಿತಿ ಪ್ರಧಾನ ಕಾರ್ಯದರ್ಶಿ ಸರಪಾಡಿ ಅಶೋಕ ಶೆಟ್ಟಿ ಸ್ವಾಗತಿಸಿ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ರಾಧಾಕೃಷ್ಣ ರೈ ಕೊಟ್ಟುಂಜ ವಂದಿಸಿದರು