ಲಾರಿಯೊಂದು ಡಿಕ್ಕಿಯಾಗಿ ದ್ವಿಚಕ್ರವಾಹನ ಸಹಸವಾರನೋರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ಸುಮಾರು 11 ಗಂಟೆ ವೇಳೆಗೆ ಬಿಸಿರೋಡಿನ ಸರ್ಕಲ್ ಬಳಿ ನಡೆದಿದೆ.ಬೈಕ್ ಸಹಸವಾರ ಬೆಂಗ್ರೆ ನಿವಾಸಿ ರಮೀಜ್ (20) ಎಂದು ಗುರುತಿಸಲಾಗಿದೆ.
ಬೈಕ್ ಸ್ಕಿಡ್ ಆಗಿ ಸಹಸವಾರ ಡಾಮರು ರಸ್ತೆಗೆ ಬಿದ್ದಿದ್ದು, ಲಾರಿ ಹರಿದು ಯುವಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾಗಿ ತಿಳಿದುಬಂದಿದೆ. ಡಿಕ್ಕಿ ಹೊಡೆದ ಲಾರಿ ಸಹಿತ ಚಾಲಕ ಪರಾರಿಯಾಗಿದ್ದು, ಬಳಿಕ ಪೋಲೀಸರು ಲಾರಿಯನ್ನು ಪತ್ತೆ ಮಾಡಿದ್ದಾರೆ. ಸ್ನೇಹಿತನ ಜೊತೆ ಅಜಿಲಮೊಗರು ಮಸೀದಿಯಲ್ಲಿ ನಡೆಯುವ ಉರೂಸ್ ಕಾರ್ಯಕ್ರಮಕ್ಕೆ ಇವರು ತೆರಳುತ್ತಿದ್ದರು ಎಂದು ಹೇಳಲಾಗಿದೆ. ಬಂಟ್ವಾಳ ಟ್ರಾಫಿಕ್ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಗೂಡ್ಸ್ ಲಾರಿಯನ್ನು ಅದರ ಚಾಲಕ ಯಾವುದೇ ಸೂಚನೆ ನೀಡದೆ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಸಹ ಸವಾರನನ್ನು ಕುಳ್ಳಿರಿಸಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲ್ ಗೆ ಲಾರಿ ಡಿಕ್ಕಿ ಹೊಡೆದು ಅಪಘಾತವಾಗಿರುತ್ತದೆ. ಇದರಿಂದ ಮೋಟಾರ್ ಸೈಕಲ್ ಸವಾರ ಮೋಟಾರ್ ಸೈಕಲ್ ಸಮೇತ ಡಾಮಾರು ರಸ್ತೆಗೆ ಎಸೆಯಲ್ಪಟ್ಟು, ಸಹ ಸವಾರ ಲಾರಿಯ ಚಕ್ರದ ಕೆಳಗೆ ಬಿದ್ದು, ಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿಯ ವೈದ್ಯರು ಪರೀಕ್ಷಿಸಿ ಸಹ ಸವಾರ ಮೊಯಿದ್ದೀನ್ ರಮೀಜ್ ನ್ನು ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ತಿಳಿಸಿದ್ದು ಸವಾರನಾದ ಅಹ್ಮದ್ ಸಜಾದ್ ನಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಅ.ಕ್ರ : 177/2023 ಕಲಂ : 279, 337, 304(A) ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿ.ಸಿ.ರೋಡ್ ಅಡ್ಡಹೊಳೆ ಚತುಷ್ಪಥ ಕಾಮಗಾರಿ ನಡೆಯುತ್ತಿರುವುದು ಗೊತ್ತೇ ಇದೆ. ಇದರ ಆರಂಭಿಕ ಜಾಗ ಬಿ.ಸಿ.ರೋಡ್ ನ ಸೇತುವೆ ಸಮೀಪ ರಸ್ತೆ ಅಗಲಗೊಳ್ಳುವ ಪ್ರಕ್ರಿಯೆ ಭರದಿಂದ ಸಾಗಿದೆ. ಸ್ಥಳೀಯರಾದರೆ ರಸ್ತೆ ಸಂಚರಿಸುವ ಸಂದರ್ಭ ಜಾಗ್ರತೆ ವಹಿಸುತ್ತಾರೆ. ಆದರೆ ನೇರವಾಗಿ ಇದೇ ರಸ್ತೆಯಲ್ಲಿ ಸಾಗುವ ಸಂದರ್ಭ ಸಾಕಷ್ಟು ಅಪಾಯಕಾರಿ ಸನ್ನಿವೇಶವನ್ನು ಎದುರಿಸಬೇಕಾಗುತ್ತದೆ. ಬಿ.ಸಿ.ರೋಡ್ ಜಂಕ್ಷನ್ ನಲ್ಲಿರುವ ಬ್ರಹ್ಮಶ್ರೀ ನಾರಾಯಣಗುರು ವೃತ್ತಕ್ಕೆ ಸುತ್ತುಹಾಕುವ ಸಂದರ್ಭ ವಾಹನ ಸವಾರರು ಮುಂಜಾಗರೂಕತೆ ವಹಿಸುವುದು ಅವಶ್ಯ.
ಬಿ.ಸಿ.ರೋಡ್ ನಿಂದ ಹಲವು ದಾರಿಗಳಿಗೆ ಕವಲೊಡೆಯುವ ಈ ಜಂಕ್ಷನ್ ಗೆ ಬಿ.ಸಿ.ರೋಡಿನಿಂದ ಮುಂದೆ ಹೋಗುವ ಸಂದರ್ಭ ಎಡಕ್ಕೆ ಚಲಿಸಿದರೆ, ಪುಂಜಾಲಕಟ್ಟೆ, ಸಿದ್ಧಕಟ್ಟೆ ಕಡೆಗೆ ಹೋಗುವ ರಸ್ತೆ ಸಿಗುತ್ತದೆ. ಅಲ್ಲೇ ಪಕ್ಕದಲ್ಲಿ ಬಂಟ್ವಾಳ ಪೇಟೆಯೊಳಗೆ ಸಾಗುವ ರಸ್ತೆ ಕವಲೊಡೆಯುತ್ತದೆ. ನೇರವಾಗಿ ಸಾಗಿದರೆ ಬೆಂಗಳೂರು ಹೆದ್ದಾರಿ. ಮಾಣಿಯಿಂದ ಬಲಕ್ಕೆ ತಿರುಗಿದರೆ, ಮೈಸೂರಿಗೆ ದಾರಿ. ಇದೇ ಸರ್ಕಲ್ ನಲ್ಲಿ ಪೂರ್ತಿಯಾಗಿ ಬಲಕ್ಕೆ ತಿರುಗಿದರೆ, ಪಾಣೆಮಂಗಳೂರು ಪೇಟೆಗೆ ಹೋಗುವ ರಸ್ತೆ. ಇದು ಬ್ರಹ್ಮಶ್ರೀ ನಾರಾಯಣಗುರು ಸರ್ಕಲ್ ಸುತ್ತಮುತ್ತಲಿನ ಭೌಗೋಳಿಕ ಸನ್ನಿವೇಶ.
ಸರಿಸುಮಾರು ಮಂಗಳೂರಿನ ನಂತೂರು ಜಂಕ್ಷನ್ ರೀತಿಯಲ್ಲೇ ಈ ಜಂಕ್ಷನ್ ಇದೆ. ಐದು ರಸ್ತೆಗಳಿಂದ ಇಲ್ಲಿ ವಾಹನಗಳು ಒಂದೇ ಕಡೆ ಜಮಾಯಿಸುತ್ತವೆ. ವಿಶೇಷವಾಗಿ ಬಂಟ್ವಾಳ, ಪುಂಜಾಲಕಟ್ಟೆ ಭಾಗದಿಂದ ಬಿ.ಸಿ.ರೋಡ್ ಕಡೆ ತಿರುಗುವ ಸಂದರ್ಭ ಎಡಬದಿಯಿಂದ ನೇರವಾಗಿ ಹೆದ್ದಾರಿಯಿಂದ ಮಂಗಳೂರು ಕಡೆಗೆ ಆಗಮಿಸುವ ವಾಹನಗಳು, ರೈಲ್ವೆ ಮೇಲ್ಸೇತುವೆಯತ್ತ ಸಾಗುವ ಸಂದರ್ಭ ಕೊಂಚ ಎಡಕ್ಕೆ ಚಲಿಸಬೇಕು. ಈ ಸಂದರ್ಭ ಬಿ.ಸಿ.ರೋಡ್ ನಿಂದ ಬೆಂಗಳೂರು ರಸ್ತೆಗೆ ಸೇರುವ ವಾಹನಗಳೂ ಬಂದರೆ, ಗೊಂದಲ ಕಟ್ಟಿಟ್ಟ ಬುತ್ತಿ. ಈ ವೇಳೆ ವಾಹನಗಳು ಪಥ ಮರೆತು, ಜಾಗ ಸಿಕ್ಕಲ್ಲಿ ನುಗ್ಗುತ್ತವೆ.
ರಸ್ತೆ ಬದಿ ವ್ಯಾಪಾರಕ್ಕೆ ಬಿದ್ದಿಲ್ಲ ಕಡಿವಾಣ
ಈ ಸರ್ಕಲ್ ಆಸುಪಾಸಿನ ರಸ್ತೆ ಬದಿಯಲ್ಲಿ ಕೊಡೆ ಮಾರಾಟ, ಈರೋಳ್, ಹಣ್ಣು ಹಂಪಲು ಮಾರಾಟ, ಹೆಲ್ಮೆಟ್ ಮಾರುವವರು ಹೀಗೆ ರಸ್ತೆ ಬದಿ ಮಾರಾಟ ಮಾಡುವವರು ಜನರನ್ನು ಆಕರ್ಷಿಸಲು ಕುಳಿತುಕೊಳ್ಳುತ್ತಾರೆ. ಅವರು ಸುರಕ್ಷಿತವಾದ ಜಾಗದಲ್ಲಿ ಮಾರಾಟ ಮಾಡಿದರೆ ಅಡ್ಡಿ ಇಲ್ಲ. ಆದರೆ ಕೊಂಡುಕೊಳ್ಳಲೆಂದು ರಸ್ತೆಯಲ್ಲೇ ವಾಹನ ನಿಲ್ಲಿಸಿ, ವ್ಯಾಪಾರಕ್ಕಿಳಿಯುವವರು ಇರುವ ಕಾರಣ ಮತ್ತೆ ಗೊಂದಲ ಸೃಷ್ಟಿಯಾಗುತ್ತದೆ. ಇದಕ್ಕೆ ಕಡಿವಾಣ ಹಾಕಬೇಕಾದವರು ಕಣ್ಮುಚ್ಚಿ ಕುಳಿತಿದ್ದಾರೆ. ಹೆದ್ದಾರಿ ನಿರ್ಮಾಣ ಆ ಭಾಗದಲ್ಲಿ ಸಂಪೂರ್ಣವಾದರೆ, ಸುವ್ಯವಸ್ಥಿತವಾದ ಟ್ರಾಫಿಕ್ ಕಂಟ್ರೋಲ್ ವ್ಯವಸ್ಥೆ ಆಗಬೇಕು. ಬಂಟ್ವಾಳದಿಂದ ಬಿ.ಸಿ.ರೋಡಿಗೆ ಬರುವ ವಾಹನಗಳು ಹಾಗೂ ಬಿ.ಸಿ.ರೋಡಿನಿಂದ ಪಾಣೆಮಂಗಳೂರಿಗೆ ಹೋಗುವ ವಾಹನಗಳ ಸಹಿತ ಯಾವುದೇ ವಾಹನಕ್ಕೂ ಎಲ್ಲಿ ಚಲಿಸಬೇಕು ಎಂಬ ಸರಿಯಾದ ಮಾರ್ಗದರ್ಶನ ನೀಡುವ ವ್ಯವಸ್ಥೆ ಆಗಬೇಕು. ಇಲ್ಲದಿದ್ದರೆ, ರಾತ್ರಿ ವೇಳೆಯಂತೂ ಅಪಾಯ ಕಾದು ಕುಳಿತಿರುತ್ತದೆ.