ಶುಕ್ರವಾರ ತಡರಾತ್ರಿ ನಡೆದ ಘಟನೆಯೊಂದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿರುವ ತಾಲೂಕು ಮಟ್ಟದ ಸರಕಾರಿ ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಈ ಸಂದರ್ಭ ಕೆಲ ಯಂತ್ರಗಳಿಗೆ ಹಾನಿಯಾದ ಘಟನೆಯೂ ನಡೆದಿದ್ದು, ರೋಗಿಗಳು ಪಾರಾಗಿದ್ದಾರೆ. ತಾಲೂಕು ಸರಕಾರಿ ಆಸ್ಪತ್ರೆಯ ತೀವ್ರ ನಿಗಾ ವಿಭಾಗದಲ್ಲಿ ಈ ಘಟನೆ ನಡೆದಿದೆ. ಐಸಿಯುವಿನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಕಾಣಿಸಿಕೊಂಡಿದೆ. ಈ ಘಟನೆ ನಡೆದ ಸಂದರ್ಭ ರೋಗಿಗಳು ಬೆದರಿದ್ದು, ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಈ ಸಂದರ್ಭ ಪಕ್ಕದ ವಿಹಿಂಪ ಕಾರ್ಯಾಲಯದಲ್ಲಿದ್ದ ದತ್ತಮಾಲಾಧಾರಿಗಳು ಆಗಮಿಸಿ ಬೆಂಕಿ ನಂದಿಸುವಲ್ಲಿ ಸಹಕರಿಸಿದ್ದಾರೆ. ರಾತ್ರಿ 1 ಗಂಟೆ ವೇಳೆ ಶಾಸಕ ಅಶೋಕ್ ಕುಮಾರ್ ರೈ ಅವರೂ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಬೆಂಕಿ ನಂದಿಸಿದ ಬಳಿಕ ದತ್ತಮಾಲಾಧಾರಿಗಳು ಇಡೀ ಆಸ್ಪತ್ರೆಯನ್ನು ಶುಚಿಗೊಳಿಸಿದ್ದು ಸಾರ್ವತ್ರಿಕ ಶ್ಲಾಘನೆಗೆ ಕಾರಣವಾಗಿದೆ.