ಶುಕ್ರವಾರ ರಾಷ್ಟ್ರೀಯ ಹೆದ್ದಾರಿಯ ನರಹರಿ ತಿರುವಿನಲ್ಲಿ ಲಾರಿಗಳೆರಡು ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮ ಓರ್ವ ಚಾಲಕ ಗಂಭೀರ ಗಾಯಗೊಂಡಿದ್ದಾರೆ, ಈ ಘಟನೆಯಿಂದ ಲಾರಿಗಳೆರಡರ ಆಯಿಲ್ ಟ್ಯಾಂಕ್ ಸ್ಪೋಟಗೊಂಡು ತೈಲ ರಸ್ತೆಯಲ್ಲಿ ಪೂರ್ತಿಯಾಗಿ ಚೆಲ್ಲಿದ್ದರಿಂದ ಹೆದ್ದಾರಿಯಲ್ಲಿ ತಾಸುಗಟ್ಟಲೆ ಸಂಚಾರ ಅಸ್ತವ್ಯಸ್ತಗೊಂಡಿತು. ಕಲ್ಲಡ್ಕ ಸಮೀಪ ನರಹರಿ ತಿರುವಿನಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತವಾಗುವ ಸಂಭವ ಜಾಸ್ತಿ.
ಮಂಗಳೂರಿನಿಂದ ಕಲ್ಲಿದ್ದಲನ್ನು ಹೇರಿಕೊಂಡು ಬೆಂಗಳೂರಿನತ್ತ ತೆರಳುತ್ತಿದ್ದ ಲಾರಿ ಹಾಗೂ ಎದುರಿನಿಂದ ಬರುತ್ತಿದ್ದ ಟ್ರಾನ್ಸ್ ಪೋರ್ಟ್ ಸಂಸ್ಥೆಯ ಲಾರಿ ನರಹರಿ ಪರ್ವತದ ತಿರುವಿನಲ್ಲಿ ಮುಖಾಮುಖಿ ಡಿಕ್ಕಿಯಾಗಿ, ಈ ಘಟನೆ ಸಂಭವಿಸಿದೆ. ಡಿಕ್ಕಿಯಾದ ರಭಸಕ್ಕೆ ಓರ್ವ ಚಾಲಕ ಗಂಭೀರ ಗಾಯಗೊಂಡಿದ್ದು, ಆತನನ್ನು ಮಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.
ಲಾರಿಗಳೆರಡರ ತೈಲ ತುಂಬಿದ ಟ್ಯಾಂಕ್ ಸ್ಪೋಟಗೊಂಡು ತೈಲ ಪೂರ್ತಿ ರಸ್ತೆಯಲ್ಲಿ ಚೆಲ್ಲಿದ್ದು,ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ಪರಿಣಾಮ ಒಂದು ಬದಿಯಿಂದ ಮೆಲ್ಕಾರ್ ವರೆಗೂ ಇನ್ನೊಂದು ಬದಿಯಿಂದ ಕಲ್ಲಡ್ಕವರೆಗೂ ವಾಹನಗಳು ಮುಂದೆ ಚಲಿಸಲಾಗದೆ ಸಾಲಿನಲ್ಲಿ ನಿಂತ ದೃಶ್ಯ ಕಂಡು ಬಂತು.
ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಬೇಟಿ ನೀಡಿದ ಟ್ರಾಫಿಕ್ ಎಸ್.ಐ.ಸುತೇಶ್ ಅಗ್ನಿಶಾಮಕ ದಳದವರನ್ನು ಸ್ಥಳಕ್ಕೆ ಕರೆಸಿ ನೀರು ಹಾಯಿಸುವ ಮೂಲಕ ತೈಲವನ್ನು ಶುಚಿಗೊಳಿಸುವ ಕಾರ್ಯ ನಡೆಸಿದರು. ಬಂಟ್ವಾಳ ಟ್ರಾಫಿಕ್ ಪೋಲೀಸರು ಸ್ಥಳದಲ್ಲಿದ್ದು ಸಹಕರಿಸಿದರು. ತೈಲ ಶುಚಿಯಾದ ಬಳಿಕ ಅಪಘಾತಕ್ಕೊಳಗಾದ ಲಾರಿಗಳೆರಡನ್ನು ಕ್ರೇನ್ ಮೂಲಕ ಬದಿಗೆ ಸರಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಬಳಿಕ ಸಂಜೆಯ ವೇಳೆ ನಿಧಾನವಾಗಿ ಟ್ರಾಫಿಕ್ ಮೊದಲಿನಂತಾಯಿತು.