ಗೃಹಬಳಕೆ ಅನಿಲ ಸಂಪರ್ಕ ಪಡೆದವರು ಇ-ಕೆವೈಸಿ ಮಾಡಿಸಿಕೊಳ್ಳಬೇಕು ಎನ್ನುವ ಮಾಹಿತಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಅಡುಗೆ ಅನಿಲ ಏಜನ್ಸಿಗಳ ಮುಂದೆ ಗ್ರಾಹಕರು ಸಾಲುಗಟ್ಟಿ ನಿಲ್ಲುವ ದೃಶ್ಯ ಇದೀಗ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಂಡುಬರುತ್ತಿದೆ. ಆಧಾರ್ ದೃಢೀಕರಣವು ಉಜ್ವಲ ಗ್ಯಾಸ್ ಸಂಪರ್ಕ ಪಡೆದಿರುವವರಿಗೆ ಪಿಎಂಯುವೈ ಮತ್ತು ಪಿಎಎಚ್ ಎಎಲ್ (PMUY ಮತ್ತು PAHAL) ಫಲಾನುಭವಿಗಳಿಗೆ ಮಾತ್ರ ಕಡ್ಡಾಯವಾಗಿದೆ. ಉಳಿದ ಬಳಕೆದಾರರಿಗೆ ಗ್ಯಾಸ್ ಸಬ್ಸಿಡಿಯ ಬಗ್ಗೆ ಪ್ರಸ್ತುತ ಯಾವುದೇ ಘೋಷಣೆ ಆಗಿರುವುದಿಲ್ಲ. ಗ್ಯಾಸ್ ಬಳಕೆದಾರರು ಯಾವುದೇ ಗೊಂದಲಕ್ಕೊಳಗಾಗಬಾರದು ಎಂದು ಆಹಾರ ಇಲಾಖೆಯ ಉಪನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ
ಆಧಾರ್ ಲಿಂಕ್ ಮಾಡಿಸಲು ಸೂಚನೆ ಬಂದಿದೆ. ಹೀಗಾಗಿ ಇ-ಕೆವೈಸಿ ಮಾಡುತ್ತಿದ್ದೇವೆ. ಡಿಸೆಂಬರ್ 31ರೊಳಗೆ ಮುಗಿಸುವ ಯಾವುದೇ ಗಡುವು ನೀಡಿಲ್ಲ. ಇದಕ್ಕೂ ಸಬ್ಸಿಡಿ ವಿಚಾರಕ್ಕೂ ಸಂಬಂಧ ಇರುವ ಕುರಿತು ಯಾವುದೇ ಮಾಹಿತಿ ಬಂದಿಲ್ಲ. ಹೀಗಾಗಿ ಗ್ರಾಹಕರು ಗಲಿಬಿಲಿಗೊಳಗಾಗುವ ಅಗತ್ಯವಿಲ್ಲ ಎಂದು ಇಲಾಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.