ಕವರ್ ಸ್ಟೋರಿ

ಪೌಷ್ಠಿಕತೆ ಅಭಿಯಾನ ನಡೆಸುವವರಿಗೇ ಹತ್ತು ತಿಂಗಳಿಂದ ವೇತನವಿಲ್ಲ!!

‘’ಸರಕಾರದ ಅತ್ಯಂತ ಜನಪ್ರಿಯ ಅಭಿಯಾನಗಳಲ್ಲಿ ಒಂದಾದ ಪೋಷಣ್ ಅಭಿಯಾನ್, ಮಾತೃವಂದನಾ ಸಿಬಂದಿಗೆ ಹತ್ತು ತಿಂಗಳಿಂದ ಗೌರವ ಧನ ದೊರಕಿಲ್ಲ. ಕೇಳಿದರೆ ಅನುದಾನದ ಕೊರತೆ ಉತ್ತರ ಬರುತ್ತದೆ. ಹೀಗಿದ್ರೆ ನಾವು ಕೆಲಸ ಮಾಡೋದು ಹೇಗೆ? ಅಭಿಯಾನದ ಕುರಿತು ಓಡಾಟ ನಡೆಸುವುದು ಹೇಗೆ’’

ಹೆಸರು ಹೇಳಲಿಚ್ಛಿಸದ ಅಭಿಯಾನದ ಗುತ್ತಿಗೆ ಸಿಬಂದಿಯೊಬ್ಬರು ಅಳಲು ತೋಡಿಕೊಂಡದ್ದು ಹೀಗೆ.

ಪೋಷಣ್ ಅಭಿಯಾನ, ಮಾತೃವಂದನಾ ಸಿಬಂದಿಗೆ ಗೌರವಧನವಿಲ್ಲದೆ ಹತ್ತು ತಿಂಗಳಾಯಿತು!. ಹೀಗಾಗಿ ಬೇರೆ ನಿರ್ವಾಹವಿಲ್ಲದೆ, ಇಂದು ಸಿಗುತ್ತದೆ, ನಾಳೆ ಸಿಗುತ್ತದೆ ಎಂಬ ಆಸೆಯಿಂದ ಗೌರವಧನವನ್ನು ನಂಬಿ ಕೆಲಸ ಮಾಡುತ್ತಿರುವ ಸಿಬಂದಿ ಹಲವಾರು ಸಮಸ್ಯೆಗಳಿಂದ ತೊಂದರೆಗೊಳಗಾಗಿದ್ದಾರೆ. ಆದರೆ ಉತ್ತರಿಸಬೇಕಾದ ಇಲಾಖೆ ಮೌನವಾಗಿದೆ.

‘’ನಾವು ಓಡಾಡಲು ವಾಹನವನ್ನು ನಿಗದಿಗೊಳಿಸಲಾಗಿದೆ. ಬಾಡಿಗೆ ಕಟ್ಟಡದಲ್ಲಿ ಕಚೇರಿ ಇದೆ. ಬಾಡಿಗೆ ಕಟ್ಟಲು ಒಂದು ರೂಪಾಯಿ ಕೂಡ ಹಣವಿಲ್ಲ. ಹೆಸರಿಗಷ್ಟೇ ವಾಹನ. ಚಾಲಕನಿಗೂ ಹಣ ನೀಡಲು ಅನುದಾನ ಬಂದಿಲ್ಲ. ಅಂಗನವಾಡಿ ಕಾರ್ಯಕರ್ತೆಯರಿಗೆ ಪೋಷಣ್ ಅಭಿಯಾನದ ಮಹತ್ವವನ್ನು ನಾವು ತಿಳಿಹೇಳಬೇಕು. ಅವರಿಗೂ ಸಮಸ್ಯೆ ಇದೆ. ಅವರ ಸಂಕಷ್ಟಗಳನ್ನೂ ನಾವು ಆಲಿಸಬೇಕು. ಮಕ್ಕಳಿಗೆ ಮೊಟ್ಟೆ ವಿತರಿಸಲು ಅಂಗನವಾಡಿ ಕಾರ್ಯಕರ್ತೆಯರಿಗೂ ಮುಂಗಡ ಹಣ ದೊರಕುತ್ತಿಲ್ಲ. ದರ ಹೆಚ್ಚಾದರೆ ಮೊಟ್ಟೆಯೂ ಸರಿಯಾಗಿ ಸಿಗುವುದಿಲ್ಲ. ಹೆಸರಿಗೆ ಅಭಿಯಾನ ಆರಂಭಿಸಿ ಕಾಸಿಲ್ಲ ಎಂದು ಕೈಎತ್ತಿದರೆ ನಾವು ಬಾಳ್ವೆ ಮಾಡೋದು ಹೇಗೆ, ಕೆಲಸವನ್ನು ಬದಲಾಯಿಸಲೂ ನಮಗೆ ಆಗುತ್ತಿಲ್ಲ. ತಿಂಗಳಿಗೆ ನಮಗೆ 20 ಸಾವಿರ ರೂ ಗೌರವಧನ ದೊರಕಬೇಕು. ಅದು ಬಾರದೆ ಹತ್ತು ತಿಂಗಳಾಯಿತು. ನಾವು ಜೀವನ ಸಾಗಿಸುವುದು ಹೇಗೆ? ನಮಗೂ ಮನೆ, ಮಕ್ಕಳಿದ್ದಾರಲ್ವಾ’’

ಹೀಗೆಂದು ಅಭಿಯಾನದ ಕಾರ್ಯನಿರ್ವಹಣಾ ಸಿಬಂದಿ ತಮ್ಮ ಸಂಕಷ್ಟಗಳನ್ನು ಹೇಳಿದರು. ಇಡೀ ರಾಜ್ಯದಲ್ಲೇ ಈ ಸಮಸ್ಯೆ ಇದೆ. ಸರಕಾರದ ಬಳಿ ಹಣ ಇಲ್ಲ, ಕೆಲಸ ಆಗದಿದ್ದರೆ ಪ್ರಶ್ನಿಸಲು ನೂರು ಮಂದಿ ಇದ್ದಾರೆ, ವೇತನ ಕೇಳಿದರೆ ನುಣುಚಿಕೊಳ್ಳುವವರೇ ಅಧಿಕ ಎನ್ನುತ್ತಾರೆ ಸಿಬಂದಿ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅನುದಾನದ ಕೊರತೆ ಎದುರಿಸುತ್ತಿರುವುದು ಗುಟ್ಟಾಗಿ ಏನೂ ಉಳಿದಿಲ್ಲ. ಪೌಷ್ಠಿಕ ಆಹಾರ ಪೂರೈಕೆಯಾಗುವುದು ಕಷ್ಟದಲ್ಲಿ ಎಂಬಂತಾಗಿದೆ. ಇಲಾಖೆ ಅಧಿಕಾರಿ, ಸಿಬಂದಿ, ಅಂಗನವಾಡಿ ಕಾರ್ಯಕರ್ತೆಯರು ಫಲಾನುಭವಿಗಳ ಪ್ರಶ್ನೆಗೆ ಉತ್ತರ ಹೇಳುವ ಸ್ಥಿತಿಯಲ್ಲಿಲ್ಲ.

ಮಾತೃಪೂರ್ಣ ಯೋಜನೆಯಡಿ ಅಂಗನವಾಡಿ ಕೇಂದ್ರಗಳಿಗೆ ಮೊಟ್ಟೆ ಪೂರೈಸುವ ಗುತ್ತಿಗೆದಾರರು ಸರಿಯಾಗಿ ಮೊಟ್ಟೆ ಸರಬರಾಜು ಮಾಡುತ್ತಿಲ್ಲ ಎಂಬ ಆರೋಪವೂ ಇದೆ. ಸರಿಯಾಗಿ ಪೇಮೆಂಟ್ ಆಗದೇ ಇದ್ದರೆ, ಅವರಾದರೂ ಯಾಕೆ ಮೊಟ್ಟೆ ಪೂರೈಸುತ್ತಾರೆ ಎಂಬ ವಾದವೂ ಇದೆ. ಹೀಗಾಗಿ ಅಂಗನವಾಡಿ ಕಾರ್ಯಕರ್ತೆಯರೇ ಕೈಯಿಂದ ಹಣ ಹಾಕಿ ಕೆಲವೆಡೆ ಮೊಟ್ಟೆ ಪೂರೈಸುತ್ತಿದ್ದಾರೆ. ತರಕಾರಿಗೂ ದುಡ್ಡಿಲ್ಲ. ಸುಖಾಸುಮ್ಮನೆ ಪೋಷಣ್ ಅಭಿಯಾನ ಎಂದು ಹೋರ್ಡಿಂಗ್ಸ್ ಹಾಕಿ ಸಾಧನೆ ಮಾಡಿದ್ದೇವೆ ಎಂದು ಬೀಗುವ ಬದಲು, ಸಕಾಲದಲ್ಲಿ ಅದಕ್ಕೆ ಬೇಕಾದ ಅನುದಾನ, ಕೆಲಸ ಮಾಡುವವರಿಗೆ ಸರಿಯಾದ ಸಮಯಕ್ಕೆ ವೇತನ ದೊರಕಿದರೆ, ಯೋಜನೆಗೊಂದು ಅರ್ಥ ಬಂದೀತು ಎಂಬುದು ಹೆಸರು ಹೇಳಲಿಚ್ಛಿಸದ ಸಿಬಂದಿಯ ಅಳಲು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts