ಕೆಲ ತಿಂಗಳ ಹಿಂದ ಬಿ.ಸಿ.ರೋಡ್ ನ ಕೈಕುಂಜೆ ಎಂಬಲ್ಲಿ ಹಾಡಹಗಲೇ ಕಳವು ಕೃತ್ಯ ನಡೆದ ಘಟನೆ ಇನ್ನೂ ಹಸಿರಾಗಿರುವಂತೆಯೇ ಬಿ.ಸಿ.ರೋಡ್ ಪೋಸ್ಟ್ ಆಫೀಸ್ ಮುಂದೆ ಅಜ್ಜಿಬೆಟ್ಟು ಶಾಲಾ ಮೈದಾನದ ಬಳಿ ಗುರುವಾರ ಮಧ್ಯಾಹ್ನ ನಡೆದ ಘಟನೆಯೊಂದರಲ್ಲಿ ಅಂಗಡಿಯೊಂದರಲ್ಲಿದ್ದ ಮಹಿಳೆಯೋರ್ವರ ಕುತ್ತಿಗೆಗೆ ಕೈ ಹಾಕಿ ಸರ ಸೆಳೆದ ಅಪರಿಚಿತ ವ್ಯಕ್ತಿಗಳೀರ್ವರು ಪರಾರಿಯಾಗಿದ್ದಾರೆ. ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.
ಕೈಕುಂಜೆಯಲ್ಲಿ ಸ್ಥಳೀಯ ಮಹಿಳೆಯೋರ್ವರ ಚಿನ್ನದ ಸರವನ್ನು ನಡೆದುಕೊಂಡು ಹೋಗುವಾಗ ಬೈಕ್ ನಲ್ಲಿ ಬಂದ ಆಗಂತುಕನೋರ್ವ ಸೆಳೆದಿದ್ದು ಇನ್ನೂ ಪತ್ತೆಯಾಗಿಲ್ಲ. ಇದೀಗ ಮತ್ತೊಂದು ಘಟನೆ ನಡೆದಿದ್ದು, ಸಾರ್ವಜನಿಕರನ್ನು ಆಘಾತಕ್ಕೊಳಪಡಿಸಿದೆ.
ಬಿಸಿರೋಡಿನ ಬಿ.ಮೂಡ ಗ್ರಾಮದ ಅಜ್ಜಿಬೆಟ್ಟು ಶಾಲಾ ಮೈದಾನದ ಬಳಿ ಇರುವ ಮಹಾಲಕ್ಷ್ಮಿ ಸ್ಟೋರ್ ಮಾಲಕಿ ಸರೋಜಿನಿ ಅವರ ಕುತ್ತಿಗೆಯಿಂದ ಇಬ್ಬರು ಕಳ್ಳರು ಬಂಗಾರದ ಚೈನ್ ಎಗರಿಸಿ ಪರಾರಿಯಾಗಿದ್ದು, ಸುಮಾರು 75 ಸಾವಿರ ಮೌಲ್ಯದ 1.5 ಪವನ್ ನ ಚಿನ್ನದ ಸರ ಕಳವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮಧ್ಯಾಹ್ನ ಸುಮಾರು 2.45 ಗಂಟೆಗೆ ಕಳ್ಳತನ ನಡೆದಿದ್ದು, ಕಳವು ಮಾಡಿದ ಇಬ್ಬರು ವ್ಯಕ್ತಿಗಳು ಹೆಲ್ಮೆಟ್ ಧರಿಸಿದ್ದರು. ಬೈಕಿನಲ್ಲಿ ಬಂದಿದ್ದ ಹಿಂಬದಿ ಸವಾರ ಅಂಗಡಿಗೆ ಬಂದು ವಿಮಲ್ ಹಾಗೂ ಚಾಕಲೇಟ್ ಪಡೆದುಕೊಂಡು , 40 ರೂ ನೀಡಿದ್ದ. ಚಿಲ್ಲರೆ ನೀಡುವ ಉದ್ದೇಶದಿಂದ ಕ್ಯಾಶ್ ಕೌಂಟರ್ ಗೆ ಬಗ್ಗಿದಾಗ ನಿಂತುಕೊಂಡಿದ್ದ ಅಪರಿಚಿತ ವ್ಯಕ್ತಿ ಸರೋಜಿನಿ ಅವರ ಕುತ್ತಿಗೆಯಲ್ಲಿದ್ದ ಬಂಗಾರ ಚೈನ್ ಎಳೆದುಕೊಂಡು ಬೈಕಿನಲ್ಲಿ ಕುಳಿತು ಪರಾರಿಯಾಗಿದ್ದಾಗಿ ಪೋಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಶನಿವಾರವಷ್ಟೇ ಕೈಕಂಬದಲ್ಲಿ 12 ಅಂಗಡಿಗಳಲ್ಲಿ ಸರಣಿ ಕಳವು ಪ್ರಕರಣಗಳು ನಡೆದಿದ್ದು, ಇದೀಗ ಕೃತ್ಯ ನಡೆದು ನಾಲ್ಕು ದಿನಗಳಲ್ಲಿ ಮತ್ತೊಂದು ಪ್ರಕರಣ ಅದೂ ಹಾಡಹಗಲೇ ರಾಜಾರೋಷವಾಗಿ ನಡೆಯುತ್ತಿರುವುದು ವ್ಯಾಪಾರಿಗಳನ್ನು ಹಾಗೂ ಸಾರ್ವಜನಿಕರನ್ನು ಆತಂಕಕ್ಕೀಡುಮಾಡಿದೆ. ನಿಲ್ಲಿಸಿದ್ದ ವಾಹನಗಳ ಕಳವು ಸಹಿತ ಹಲವು ಕಳವು ಕೃತ್ಯಗಳು ಬಿ.ಸಿ.ರೋಡ್ ಪರಿಸರದಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಪರಾಧಿಗಳನ್ನು ಸೆರೆಹಿಡಿಯುವ ಉದ್ದೇಶದಿಂದ ಹಾಕಲಾಗಿರುವ ಸಿಸಿ ಕ್ಯಾಮರಾಗಳನ್ನು ಸುಸ್ಥಿತಿಯಲ್ಲಿರಿಸಿ, ಇಡೀ ಬಿ.ಸಿ.ರೋಡ್ ಪೇಟೆಯನ್ನು ಕ್ಯಾಮರಾ ಕಣ್ಗಾವಲಿನಲ್ಲಿ ಇರಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಘಟನೆಯ ಬಳಿಕ ಪೊಲೀಸರು ತೀವ್ರ ಶೋಧ ಕಾರ್ಯ ನಡೆದಿದ್ದು, ನಾನಾ ಆಯಾಮಗಳಲ್ಲಿ ತಪಾಸಣೆಗಳನ್ನು ನಡೆಸುತ್ತಿದ್ದಾರೆ.