ಅಕ್ಕಿ ಕಳವು ಪ್ರಕರಣ ಬೆಳಕಿಗೆ ಬಂದು ನಾಲ್ಕು ತಿಂಗಳಾದರೂ ತನಿಖೆಗೆ ದೊರಕಿಲ್ಲ ವೇಗ. ಹೀಗ್ಯಾಕೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ, ನಿಕಟಪೂರ್ವ ಸದಸ್ಯರೂ ಆಗಿರುವ ತುಂಗಪ್ಪ ಬಂಗೇರ ಪ್ರಶ್ನಿಸಿದ್ದಾರೆ.
ಆಹಾರ ನಿಗಮದಿಂದ ನ್ಯಾಯಬೆಲೆ ಅಂಗಡಿ, ಸೊಸೈಟಿಗಳ ಮೂಲಕ ಜನರಿಗೆ ವಿತರಣೆಯಾಗಬೇಕಿದ್ದ ಬರೋಬ್ಬರಿ 3892 ಕ್ವಿಂಟಾಲ್ ತೂಕದ 1.32 ಕೋಟಿ ರೂ ಬೆಲೆಯ ಅಕ್ಕಿ ಲೆಕ್ಕಕ್ಕೆ ಸಿಗದ ಪ್ರಕರಣಕ್ಕೆ ಸಂಬಂಸಿದಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಕಾಧಿಕಾರಿ ಭೇಟಿ ನೀಡಿದ ಬಳಿಕ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧಿಕಾರಿಗಳು ಮತ್ತು ಪೊಲೀಸರು ತನಿಖೆ ನಡೆಸಿದ್ದರು. ಆದರೆ ಆ ತನಿಖೆಗೆ ವೇಗ ದೊರಕಿಲ್ಲ ಎಂದು ಜಿಪಂ ಮಾಜಿ ಉಪಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಆರೋಪಿಸಿದ್ದಾರೆ.
ಶನಿವಾರ ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಬಂಟ್ವಾಳ ತಾಲೂಕು ಗೋದಾಮಿನಲ್ಲಿ ಕಂಡುಬಂದ ಈ ಹಗರಣದ ಕುರಿತು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ ಬಳಿಕ ಅಧಿಕಾರಿಗಳು ಎಚ್ಚೆತ್ತು ತನಿಖೆ ನಡೆಸಿದಾಗ ಅಕ್ಕಿ ಹಗರಣದ ಬೃಹತ್ ಜಾಲ ಹೊರಬಿದ್ದಿತ್ತು ಎಂದು ನೆನಪಿಸಿದರು.
ಕಳೆದ ಆಗಸ್ಟ್ ತಿಂಗಳಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ಆದರೆ ಇದರ ತನಿಖೆ ಯಾವ ಹಂತದಲ್ಲಿದೆ, ಇದರ ಹಿಂದಿರುವ ನೈಜ ಆರೋಪಿಗಳು ಯಾರು ಎಂಬುದನ್ನು ಇಲಾಖೆ ಇನ್ನೂ ಕೂಡ ಬಹಿರಂಗ ಪಡಿಸಿಲ್ಲ. ಇಂತಹ ಪ್ರಕರಣಗಳು ಕೇವಲ ಬಂಟ್ವಾಳ ಅಲ್ಲದೆ ಇತರ ತಾಲೂಕು, ಜಿಲ್ಲೆಯಲ್ಲಿ ಬೃಹತ್ ಜಾಲದ ರೀತಿಯಲ್ಲಿ ನಡೆಯುವ ಅನುಮಾನ ಹುಟ್ಟಿಕೊಂಡಿದ್ದು, ಆದರೆ ದ.ಕ.ಜಿಲ್ಲಾಡಳಿತ, ಪೊಲೀಸ್ ಇಲಾಖೆ ನೈಜ ಆರೋಪಿಗಳ ಬಂಧನದಲ್ಲಿ ವಿಫಲವಾಗಿದೆ ಎಂದು ದೂರಿದರು.
ಅಧಿವೇಶನದಲ್ಲಿ ಪ್ರಸ್ತಾಪ ಮಾಡುವಂತೆ ಒತ್ತಾಯ
ಈ ಕುರಿತು ಅಧಿವೇಶನದಲ್ಲೂ ಪ್ರಸ್ತಾಪ ಮಾಡುವಂತೆ ಶಾಸಕರಲ್ಲಿ ಒತ್ತಾಯಿಸುತ್ತೇನೆ. ಜತೆಗೆ ಇಲಾಖೆ ಸಚಿವರಿಂದ ಹಿಡಿದು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ನೈಜ ಅಪರಾಽಗಳ ಪತ್ತೆಗೆ ಕ್ರಮೈಗೊಳ್ಳದೇ ಇದ್ದರೆ ತೀವ್ರ ಸ್ವರೂಪದ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು. ಕೇವಲ ಗೋದಾಮಿನ ಮ್ಯಾನೇಜರ್‌ನ ಬಂಧನ, ತಾಲೂಕು ಕಚೇರಿ ಸಿಬಂದಿಯ ಅಮಾನತು ಬಿಟ್ಟರೆ ಬೇರೆನ್ನೂ ಮಾಡಿಲ್ಲ. ಬಡವರ ಊಟದ ಅಕ್ಕಿಯನ್ನು ಕದ್ದು ದಂಧೆ ಮಾಡುವ ತಂಡವನ್ನು ಸರಕಾರ ಬೇಧಿಸಬೇಕಾದರೆ ಸಿಐಡಿ, ಸಿಒಡಿಯಂತಹ ಉನ್ನತ ಮಟ್ಟದ ತನಿಖೆ ಅಗತ್ಯವಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಬಂಟ್ವಾಳ ಪುರಸಭಾ ಸದಸ್ಯ ಎ.ಗೋವಿಂದ ಪ್ರಭು ಉಪಸ್ಥಿತರಿದ್ದರು.
ಬೇಲಿಯೇ ಎದ್ದು ಹೊಲ ಮೇಯುತ್ತಿದೆ:
ಬಡವರ ಪಡಿತರ ಅಕ್ಕಿಯನ್ನು ಜನರಿಗೆ ನೀಡದೆ ಕಸಿದು ಕಳ್ಳತನದ ಮೂಲಕ ಅವ್ಯವಹಾರ ಮಾಡುವ ಗ್ಯಾಂಗನ್ನು ಪತ್ತೆ ಮಾಡುವಲ್ಲಿ ಜಿಲ್ಲಾಡಳಿತ ಹಾಗೂ ಸರಕಾರ ವಿಫಲವಾಗಿದೆ ಎಂದು ಆರೋಪಿಸಿದರು. ಬೇಲಿಯೇ ಎದ್ದು ಹೊಲ ಮೇಯುತ್ತಿರುವಂತಹ ಅಧಿಕಾರಿಗಳಿಗೆ, ಅದಕ್ಕೆ ಪ್ರೋತ್ಸಾಹಿಸುವ ದಳ್ಳಾಳಿಗಳಿಗೆ ಶಿಕ್ಷೆ ಆಗಲೇ ಬೇಕು ಹಾಗೂ ಅವರನ್ನು ತಕ್ಷಣ ಬಂಧಿಸಬೇಕು, ಇಲ್ಲವಾದಲ್ಲಿ ತಾಲೂಕಿನ ಬಿಪಿಎಲ್ ಕಾರ್ಡ್‌ಕುಟುಂಬದವರು ಉಗ್ರ ಪ್ರತಿಭಟನೆ ನಡೆಸಲು ಸನ್ನದ್ಧರಾಗಿರುವುದಾಗಿ ತುಂಗಪ್ಪ ಬಂಗೇರ ಎಚ್ಚರಿಸಿದರು.
ಘಟನೆಯ ವಿವರ:
ಕಳೆದ ನಾಲ್ಕು ತಿಂಗಳ ಹಿಂದೆ ಈ ಪ್ರಕರಣ ಬೆಳಕಿಗೆ ಬಂದಿತ್ತು. ಆ ಸಂದರ್ಭ ಓರ್ವನನ್ನು ವಶಕ್ಕೆತೆಗೆದುಕೊಂಡು ವಿಚಾರಣೆ ನಡೆಸಲಾಗಿತ್ತು. ಬಳಿಕ ಆಹಾರ ಇಲಾಖೆಯ ಓರ್ವನನ್ನು ಅಮಾನತು ಮಾಡಲಾಗಿತ್ತು. ಆದರೆ ಇದರ ಹಿಂದೆ ಯಾರಿದ್ದಾರೆ ಎಂಬುದು ಮಾತ್ರ ಬಹಿರಂಗವಾಗಲೇ ಇಲ್ಲ. ಎಷ್ಟು ಸಮಯದಿಂದ ಅಕ್ಕಿ ಸಾಗಾಟ ನಡೆಯುತ್ತಿದೆ, ಯಾವ ಕಡೆಗಳಿಗೆ ಹೋಗುತ್ತಿದೆ ಎಂಬಿತ್ಯಾದಿ ವಿಚಾರಗಳ ಕುರಿತು ಯಾವುದೇ ಸ್ಪಷ್ಟ ಚಿತ್ರಣ ದೊರಕಿಲ್ಲ. ಮೂರು ಗೋದಾಮುಗಳಲ್ಲಿ ಅಧಿಕಾರಿಗಳು ದಾಸ್ತಾನು ಪರಿಶೀಲನೆ ಮಾಡಿದಾಗ ಅಲ್ಲೂ ಲೆಕ್ಕಾಚಾರ ತಪ್ಪಿದ್ದನ್ನು ಗಮನಿಸಿದ್ದರು. ದಾಸ್ತಾನು ಕೊಠಡಿಯಲ್ಲಿ ಯಾಕೆ ಈ ತರಹದ ವ್ಯತ್ಯಾಸ ಆಗಿದೆ ಎಂಬುದರ ಮೇಲೆ ಇಲ್ಲಿನ ಡಿಪೋ ಮ್ಯಾನೇಜರ್ ವಿರುದ್ದ ಪ್ರಕರಣ ದಾಖಲು ಮಾಡಲಾಗಿತ್ತು. ಯಾವ ರೀತಿಯಲ್ಲಿ ವ್ಯತ್ಯಾಸ ಕಂಡು ಬಂದಿದೆ ಎಂಬುದರ ಬಗ್ಗೆ ಕೆ.ಎಸ್.ಎಪ್.ಸಿ.ಯ ರಾಜ್ಯಮಟ್ಟದ ಅಧಿಕಾರಿಗಳು ತನಿಖೆ ನಡೆಸಿದ್ದರು.
ಸುಮಾರು ೧,೩೨,೩೬೦,೩೦ ಕೋಟಿ ಮೌಲ್ಯದ, ೩೮೯೨.೯೫.೪೫೦ ಕಿಂಟ್ವಾಲ್ ಅಕ್ಕಿಯ ಕೊರತೆ ದಾಸ್ತಾನು ಕೊಠಡಿಯಲ್ಲಿ ಕಂಡು ಬಂದಿದ್ದು, ಅವ್ಯವಹಾರ ನಡೆದಿರಬೇಕು ಎಂದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಮಂಗಳೂರು ಕಚೇರಿ ವ್ಯವಸ್ಥಾಪಕ ಶರತ್ ಕುಮಾರ್ ಹೋಂಡಾ ದೂರು ನೀಡಿದ್ದರು. ಪಡಿತರ ವಿತರಣೆಯು ವಿಳಂಬವಾಗುತ್ತಿರುವ ಬಗ್ಗೆ ಅನುಮಾನ ಬಂದು ಜಿಲ್ಲಾ ವ್ಯವಸ್ಥಾಪಕರ ಮೌಖಿಕ ಆದೇಶದ ಮೇಲೆ ಆಗಸ್ಟ್ ೧೭ರಂದು ಬಂಟ್ವಾಳದ ಸಗಟು ಮಳಿಗೆಗೆ ಬಂದು ದಾಸ್ತಾನು ಪರಿಶೀಲಿಸಿದಾಗ, ಫಿಸ್ಟ್ ತಂತ್ರಾಂಶದ ಪ್ರಕಾರ ಸಗಟು ಮಳಿಗೆಯಲ್ಲಿ ಇರಬೇಕಾಗಿದ್ದ ಭೌತಿಕ ದಾಸ್ತಾನುವಿಗಿಂತ ಅಂದಾಜು ೧,೩೨,೩೬,೦೩೦ ರೂ ಮೌಲ್ಯದ ೩೮೯೨ ಕ್ವಿಂಟಾಲ್ ಅಕ್ಕಿ ಕೊರತೆ ಇರುವುದು ಕಂಡು ಬಂದಿರುತ್ತದ ಎಂದು ಈ ಬಗ್ಗೆ ಬಂಟ್ವಾಳ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ (ನಿ) ಗೋದಾಮಿನ ನಿವಾರ್ಹಕರಾಗಿದ್ದ ಕಿರಿಯ ಸಹಾಯಕರ ವಿರುದ್ದ ದೂರು ನೀಡಿದ್ದನ್ವಯ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.