ಬಂಟ್ವಾಳ: ಕೈ ಕಾಲುಗಳಿಲ್ಲದ ಬಡ ಅಶಕ್ತರಿಗೆ ಉಚಿತ ಕೃತಕ ಕೈ ಕಾಲುಗಳ ಜೋಡಣಾ ಶಿಬಿರವು ಡಿಸೆಂಬರ್ 9 ಮತ್ತು 10 ರಂದು ಬಿ.ಸಿ. ರೋಡ್ ಲಯನ್ಸ್ ಸೇವಾ ಮಂದಿರದಲ್ಲಿ ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕದ ವತಿಯಿಂದ ನಡೆಯಲಿದೆ. ಬೆಂಗಳೂರಿನ ಕರ್ನಾಟಕ ಮಾರ್ವಾಡಿ ಯೂತ್ ಫೆಡರೇಶನ್ ಶಿಬಿರಕ್ಕೆ ಸಹಯೋಗ ನೀಡಲಿದೆ.
ಕರ್ನಾಟಕ, ಕೇರಳ, ಗೋವಾ, ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಿಂದ ಪರಿಶೀಲನೆ ಮಾಡಿರುವ ನೂರಕ್ಕೂ ಅಧಿಕ ವಿಕಲಚೇತನ ಫಲಾನುಭವಿಗಳು ಶಿಬಿರದ ನೋಂದಾವಣೆ ಮಾಡಿದ್ದು, ಎರಡು ದಿನಗಳ ಶಿಬಿರದಲ್ಲಿ ಅವರು ಕೃತಕ ಅವಯವಗಳನ್ನು ಪಡೆಯಲಿದ್ದಾರೆ. ಅಪಘಾತದಿಂದ ಮತ್ತು ಜನಿಸುವಾಗಲೇ ಹಾಗೂ ಸಕ್ಕರೆ ಕಾಯಿಲೆ ಗ್ಯಾಂಗ್ರಿನ್ ನಂತಹ ವಿವಿಧ ಕಾಯಿಲೆಗಳಿಂದ ಅಂಗಾಂಗಗಳನ್ನು ಕಳಕೊಂಡ ಬಡವರಿಗೆ ಶಿಬಿರದಲ್ಲಿ ಅಳತೆ ತೆಗೆದು ಅದೇ ದಿನ ಜೈಪುರ್ ಬ್ರಾಂಡಿನ ಕೃತಕ ಅವಯವಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ ಎಂದು ಬಂಟ್ವಾಳ ಜಮೀಯ್ಯತುಲ್ ಫಲಾಹ್ ಅಧ್ಯಕ್ಷರಾದ ರಶೀದ್ ವಿಟ್ಲ ತಿಳಿಸಿದ್ದಾರೆ.