ಸುಮಾರು 40 ವಿಶೇಷಚೇತನ ಮಕ್ಕಳೂ ಸೇರಿದಂತೆ 3500ಕ್ಕೂ ಅಧಿಕ ಮಕ್ಕಳು ಭಾಗವಹಿಸುವ ಹೊನಲು ಬೆಳಕಿನ ಸಾಹಸಮಯ ದೃಶ್ಯಗಳೂ ಒಳಗೊಂಡಿರುವ ಕ್ರೀಡೋತ್ಸವ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಡಿ.9ರಂದು ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಗಣ್ಯರ ದಂಡು ಆಗಮಿಸಲಿದೆ.
ಈ ವಿಷಯವನ್ನು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರೂ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರೂ ಆಗಿರುವ ಡಾ. ಪ್ರಭಾಕರ ಭಟ್ ಕಲ್ಲಡ್ಕ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಚಲನ, ಶಿಶು ನೃತ್ಯ, ಘೋಷ್, ಜಡೆ ಕೋಲಾಟ, ದೀಪಾರತಿ, ನಿಯುದ್ಧ, ಯೋಗಾಸನ, ಪ್ರಾಥಮಿಕ ಸಾಮೂಹಿಕ, ಕೋಲ್ಮಿಂಚು, ನೃತ್ಯಭಜನೆ, ಮಲ್ಲಕಂಭ, ತಿರುಗುವ ಮಲ್ಲಕಂಭ, ಟಿಕ್ ಟಿಕ್ ಪ್ರದರ್ಶನ, ನೃತ್ಯ ವೈಭವ, ಏಕಚಕ್ರ, ದ್ವಿಚಕ್ರ ಸಮತೋಲನ, ಬೆಂಕಿ ಸಾಹಸ, ಚೆಂಡೆ ವಾದ್ಯ, ಕಾಲ್ಚಕ್ರ, ಕೂಪಿಕಾ ಸಮತೋಲನ, ಪ್ರೌಢ ಸಾಮೂಹಿಕ ಹೀಗೆ 20 ಕಾರ್ಯಕ್ರಮಗಳಿದ್ದು, ಎಲ್ಲವೂ ಒಂದು ನಿಮಿಷವೂ ವಿರಾಮವಿಲ್ಲದೆ ಒಂದರ ನಂತರ ಮತ್ತೊಂದರಂತೆ ನಡೆಯುತ್ತದೆ. ವಿದ್ಯಾಕೇಂದ್ರ ಆರಂಭಗೊಂಡ ಬಳಿಕ ಮೂವತ್ತು ಕ್ರೀಡೋತ್ಸವ ಜರಗಿದ್ದು, ಈ ಬಾರಿ ಚಂದ್ರಯಾನ 3 ಭಾರತದ ಸಾಧನೆ ಪ್ರದರ್ಶನ ಸಹಿತ ಹಲವು ಪ್ರದರ್ಶನಗಳು ನಡೆಯಲಿವೆ ಎಂದರು.
ಚಿತ್ರನಟ ಪ್ರಕಾಶ್ ಬೆಳವಾಡಿ ಸೇರಿದಂತೆ ಹಲವು ಗಣ್ಯರು, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ. ವಿಧಾನಪರಿಷತ್ ಸದಸ್ಯ ಭೋಜೇಗೌಡ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ್, ಮುರುಗೇಶ್ ನಿರಾಣಿ, ಸುರೇಶ್ ಶೆಟ್ಟಿ ಗುರ್ಮೆ, ಸುನಿಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಯಶಪಾಲ ಸುವರ್ಣ, ಗುರುರಾಜ ಗಂಟಿಹೊಳೆ, ಉಮಾನಾಥ ಕೋಟ್ಯಾನ್, ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಹರೀಶ್ ಪೂಂಜ, ರಾಜೇಶ್ ನಾಯ್ಕ್, ಭಾಗೀರಥಿ ಮುರುಳ್ಯ, ಕಿರಣ್ ಕೊಡ್ಗಿ ಸಹಿತ ಹಲವು ಗಣ್ಯರು ಆಗಮಿಸುವರು ಉದ್ಯಮಿಗಳು ಸೇರಿ ನೂರಕ್ಕೂ ಅಧಿಕ ಮಂದಿಯನ್ನು ವಿಶೇಷವಾಗಿ ಆಹ್ವಾನಿಸಲಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ವಿದ್ಯಾಕೇಂದ್ರದ ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಸಹಸಂಚಾಲಕ ರಮೇಶ್ ಉಪಸ್ಥಿತರಿದ್ದರು.