ಬಂಟ್ವಾಳ: ನೃತ್ಯಗುರು ವಿದುಷಿ ವಿದ್ಯಾ ಮನೋಜ್ ನಿರ್ದೇಶನದ ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್ (ರಿ) ಕಲ್ಲಡ್ಕ ಭರತನಾಟ್ಯ ಸಂಸ್ಥೆಯ ಕಲ್ಲಡ್ಕ ಮತ್ತು ಬಿ.ಸಿ.ರೋಡ್ ಶಾಖೆಗಳ ವಿದ್ಯಾರ್ಥಿಗಳಿಂದ ಕಲಾ ಪರ್ವ 2023, ನವೆಂಬರ್ 30ರಂದು ಸ್ಪರ್ಶ ಕಲಾಮಂದಿರದಲ್ಲಿ ನಡೆಯಿತು.
ವಿಶ್ವಕಲಾನಿಕೇತನ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ ಆಂಡ್ ಕಲ್ಚರ್, ಪುತ್ತೂರು ನಿರ್ದೇಶಕರಾದ ಕರ್ನಾಟಕ ಕಲಾಶ್ರೀ ವಿದುಷಿ ನಯನಾ ವಿ. ರೈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ನೃತ್ಯ ಕಲಿಯುವಿಕೆಗೆ ಮಕ್ಕಳಲ್ಲಿ ಶ್ರದ್ಧೆ ಹಾಗೂ ಹೆತ್ತವರ ನಿರಂತರ ಪ್ರೋತ್ಸಾಹ ಎಷ್ಟು ಮುಖ್ಯ ಎಂದರು.
ಮುಖ್ಯ ಅತಿಥಿಗಳಾಗಿ ಪತ್ರಕರ್ತರಾದ ಹರೀಶ್ ಮಾಂಬಾಡಿ ಪಾಲ್ಗೊಂಡು ಮಾತನಾಡಿ, ಕಲಿಯಬೇಕಾದರೆ ಆಸಕ್ತಿ ಪ್ರಮುಖವಾಗುತ್ತದೆ ವಿದ್ಯಾರ್ಥಿಗಳಿಗೆ ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳೂ ಮುಖ್ಯ ಎಂದು ಹೇಳಿದರು. ಕಲಾ ಶಾಲೆಯ ಗುರುಗಳಾದ ವಿದ್ಯಾ ಮನೋಜ್ ಸ್ವಾಗತಿಸಿದರು. ನೃತ್ಯ ಶಾಲೆಯ ಸುಮಾರು 120ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೃತ್ಯ ಕಾರ್ಯಕ್ರಮವನ್ನು ನೀಡಿದರು ಭರತನಾಟ್ಯ ಕಾರ್ಯಕ್ರಮದ ಹಿಮ್ಮೇಳದಲ್ಲಿ ನಟುವಾಂಗ ವಿದುಷಿ ವಿದ್ಯಾ ಮನೋಜ್, ಹಾಡುಗಾರಿಕೆಯಲ್ಲಿ ಶ್ರೀದೇವಿ ಕಲ್ಲಡ್ಕ ಹಾಗೂ ಕೃತಿ ಆರ್., ಮೃದಂಗ ವಾದನದಲ್ಲಿ ಬಾಲಚಂದ್ರ ಭಾಗವತ್, ಪಿಟೀಲು ವಾದನದಲ್ಲಿ ಶ್ರೀಧರ ಆಚಾರ್ಯ ಸಹಕರಿಸಿದರು. ಆಶಾ ಪಿ. ರೈ ಕಾರ್ಯಕ್ರಮ ನಿರ್ವಹಿಸಿದರು.