ಇಲ್ಲಿನ ಬಿ.ಸಿ.ರೋಡ್ ನಲ್ಲಿರುವ ಪೊಲೀಸ್ ಲೇನ್ ನ ಶ್ರೀ ಅನ್ನಪೂರ್ಣೇಶ್ವರಿ ನಾಗದೇವರ ದೇವಸ್ಥಾನ ಬ್ರಹ್ಮಕಲಶೋತ್ಸವ ಫೆಬ್ರವರಿ ತಿಂಗಳಲ್ಲಿ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ವಿಶೇಷ ಸಭೆ ಕ್ಷೇತ್ರದ ಸಭಾಂಗಣದಲ್ಲಿ ಗುರುವಾರ ಬೆಳಗ್ಗೆ ನಡೆಯಿತು. ಈ ಸಂದರ್ಭ ಬ್ರಹ್ಮಕಲಶೋತ್ಸವ ಸಮಿತಿ ರಚಿಸಲಾಗಿದ್ದು, ವಿವಿಧ ಉಪಸಮಿತಿಗಳನ್ನು ಘೋಷಿಸಲಾಯಿತು.
ಈ ಸಂದರ್ಭ ಮಾತನಾಡಿದ ಸಮಿತಿಯ ಗೌರವಾಧ್ಯಕ್ಷ ಡಿವೈಎಸ್ಪಿ ವಿಜಯ ಪ್ರಸಾದ್, ಶ್ರೀ ಅನ್ನಪೂರ್ಣೇಶ್ವರಿ ದೇವಿ ಸನ್ನಿಧಿಯಲ್ಲಿ ತಮ್ಮೆಲ್ಲರ ತನು, ಮನ, ಧನದ ಸಹಕಾರದಿಂದ ಜೀರ್ಣೋದ್ಧಾರ ಕೆಲಸ ಕಾರ್ಯಗಳು ನಡೆಯುತ್ತಿದ್ದು, ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಇನ್ನು ಸನ್ನಿಧಿಯಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಸಮಿತಿಗಳನ್ನು ರಚಿಸಿ, ವಿಜೃಂಭಣೆಯಿಂದ ಕಾರ್ಯಕ್ರಮಗಳನ್ನು ನಿರ್ವಿಘ್ನವಾಗಿ ನಡೆಸಬೇಕಾಗಿದೆ. ದೇವರ ಮುಂದೆ ನಾವೆಲ್ಲರೂ ಒಂದೇ, ಯಾವುದೇ ತಾರತಮ್ಯವಿಲ್ಲದೆ, ಒಟ್ಟಾಗಿ ದೇವತಾ ಕಾರ್ಯದಲ್ಲಿ ಕೈಜೋಡಿಸೋಣ ಎಂದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಬ್ರಹ್ಮಕಲಶೋತ್ಸವಕ್ಕೆ ದಿನಗಣನೆ ಆರಂಭಗೊಂಡಿದ್ದು, ಸರ್ವರ ಸಹಕಾರ ಅಗತ್ಯವಾಗಿದೆ ಎಂದರು.ರೋಟರಿ ಮಾಜಿ ಗವರ್ನರ್ ಹಾಗೂ ಸಮಾಜಸೇವಕ ಎನ್. ಪ್ರಕಾಶ್ ಕಾರಂತ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿದ್ದು. ಉಪಾಧ್ಯಕ್ಷರಾಗಿ ನಾಗೇಶ್, ಅಶೋಕ್ ಕುಮಾರ್, ಮಹಾಬಲ ಶೆಟ್ಟಿ ಬೋಳಂತೂರುಗುತ್ತು, ಸುದರ್ಶನ ಜೈನ್ ಪಂಜಿಕಲ್ಲು, ಪೊಲೀಸ್ ನಿರೀಕ್ಷಕರಾದ ಶಿವಕುಮಾರ್, ಅನಂತ ಪದ್ಮನಾಭ ಆಯ್ಕೆಯಾಗಿದ್ದಾರೆ ಎಂದು ಈ ಸಂದರ್ಭ ಪ್ರಕಟಿಸಲಾಯಿತು.
ಇದೇ ವೇಳೆ ವಿವಿಧ ಸಮಿತಿ ಉಪಸಮಿತಿ ಕುರಿತು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ ಮಾಹಿತಿ ನೀಡಿದರು. ಇಪ್ಪತ್ತು ಸಮಿತಿಗಳನ್ನು ಮಾಡಲಾಗಿದ್ದು, ಸಮಾಜದ ಎಲ್ಲರೂ ತೊಡಗಿಸಿಕೊಂಡಿದ್ದು, ಎಲ್ಲರೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು.ಗೌರವಾಧ್ಯಕ್ಷರಾದ ನ್ಯಾಯವಾದಿ ಅಶ್ವನಿ ಕುಮಾರ್ ರೈ, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಶುಭ ಹಾರೈಸಿದರು.ಕಾರ್ಯಾಧ್ಯಕ್ಷ ಸಂಜೀವ ಪೂಜಾರಿ ಗುರುಕೃಪಾ, ಪೊಲೀಸ್ ನಿರೀಕ್ಷಕರಾದ ಶಿವಕುಮಾರ್, ಅನಂತಪದ್ಮನಾಭ, ಚಂಡಿಕೇಶ್ವರಿ ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಲೋಕನಾಥ ಶೆಟ್ಟಿ, ರಕ್ತೇಶ್ವರಿ ದೇವಿ ದೇವಸ್ಥಾನದ ಆಡಳಿತ ಸಮಿತಿ ಅದ್ಯಕ್ಷ ವಿಶ್ವನಾಥ ಪೂಜಾರಿ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಜಗನ್ನಾಥ ಶೆಟ್ಟಿ, ಕ್ಷೇತ್ರದ ಪ್ರಧಾನ ಅರ್ಚಕ ಮಾದಕಟ್ಟೆ ಈಶ್ವರ ಭಟ್, ಪ್ರಮುಖರಾದ ಆನಂದ, ಕೇಪು ಗೌಡ ಉಪಸ್ಥಿತರಿದ್ದರು.ಆಡಳಿತ ಮಂಡಳಿ ಗೌರವಾಧ್ಯಕ್ಷ ಬಿ.ಜಗನ್ನಾಥ ಚೌಟ ಬದಿಗುಡ್ಡೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪೊಲೀಸ್ ಇಲಾಖೆ ಸಿಬಂದಿ ವಿವೇಕ್ ರೈ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಸಮಿತಿಯ ಐತಪ್ಪ ಪೂಜಾರಿ ವಂದಿಸಿದರು.