ಕವರ್ ಸ್ಟೋರಿ

ಟೋಲ್ ಪ್ಲಾಝಾ ಸರ್ವೀಸ್ ರಸ್ತೆ: ಹೇಳುವವರು, ಕೇಳುವವರು ಯಾರೂ ಇಲ್ಲವೇ?

 

‘’ಸರ್ವೀಸ್ ರಸ್ತೆಯಾದರೇನು, ಹೋಗುವವರು ಮನುಷ್ಯರಲ್ಲವೇ?’’

ಇದು ಬಿ.ಸಿ.ರೋಡ್ ನಿಂದ ಮಂಗಳೂರಿಗೆ ತೆರಳುವ ಸಂದರ್ಭ ಟೋಲ್ ಪ್ಲಾಝಾಕ್ಕಿಂತ ಮೊದಲು ತಲಪಾಡಿ ಸಮೀಪ ಬಲಕ್ಕೆ ತಿರುಗಿ, ಸರ್ವೀಸ್ ರಸ್ತೆ ಪ್ರವೇಶಿಸುವವರು ಪ್ರತಿನಿತ್ಯ ಕೇಳುವ ಪ್ರಶ್ನೆ. ಆದರೆ ಈ ಪ್ರಶ್ನೆ ಕೇಳಬೇಕಾದವರನ್ನು ತಲುಪುವುದಿಲ್ಲ. ಸಂಬಂಧಪಟ್ಟವರು ಯಾರು ಎಂದು ಯಾರಿಗೂ ಗೊತ್ತಿಲ್ಲ. ಹೀಗಾಗಿ ಹೇಳುವವರು ಕೇಳುವವರು ಯಾರೂ ಇಲ್ಲವೇ ಎಂದು ಪ್ರಶ್ನಿಸುವಂತಾಗಿದೆ. ಕಾರಣ ಇಷ್ಟೇ.. ಸರ್ವೀಸ್ ರಸ್ತೆಯುದ್ದಕ್ಕೂ ಸಣ್ಣಪುಟ್ಟ ಹೊಂಡಗಳಾದರೆ, ಮತ್ತೆ ಮೇಲೆ ಹತ್ತುವ ಜಾಗದಲ್ಲಿ ಆಳವಾದ ಹೊಂಡಗಳು. ‘’ವಾಹನಗಳು ಈ ರಸ್ತೆಯಲ್ಲಿ ಹೋಗಬಾರದು ಎಂದು ಹಾರೆ, ಪಿಕ್ಕಾಸು ಹಿಡಿದು, ಗುಂಡಿ ಮಾಡಿದಂತಿದೆ’’ ಎಂಬುದು ನಿತ್ಯ ಪ್ರಯಾಣಿಕರ ಆಕ್ಷೇಪ.

ಸರ್ವೀಸ್ ರಸ್ತೆಯಲ್ಲಿ ಸಾಗಿದ ವಾಹನಗಳು ಹೆದ್ದಾರಿ ಸೇರುವ ಭಾಗದಲ್ಲಿ ಬೃಹತ್ ಹೊಂಡಗಳಿಂದ ಸಣ್ಣ ಕಾರುಗಳು ಜಖಂಗೊಳ್ಳುವ ಸ್ಥಿತಿ ಇದ್ದರೂ, ರಸ್ತೆ ದುರಸ್ತಿಗೆ ಯಾರೂ ಕ್ರಮವಹಿಸಿಲ್ಲ.

ಹೆದ್ದಾರಿಗೆ ಸಂಪರ್ಕಿಸುವ ಏರು ರಸ್ತೆಯಲ್ಲಿ ಒಂದು ಅಡಿಗೂ ಆಳದ ಬೃಹತ್ ಗುಂಡಿಗಳಿದ್ದು, ಅವುಗಳನ್ನು ಮುಚ್ಚಲು ಕೆಂಪುಕಲ್ಲುಗಳನ್ನು ಬಳಸಲಾಗಿದೆ. ಆದರೆ ಇದೀಗ ಬರೀ ಕಲ್ಲುಗಳು ಉಳಿದುಕೊಂಡಿದ್ದು, ಸಣ್ಣ ಕಾರುಗಳ ತಳ ಭಾಗಕ್ಕೆ ತಾಗಿ ನಿತ್ಯವೂ ವಾಹನಗಳಿಗೆ ಹಾನಿಯಾಗುತ್ತಿದೆ. ಇದರಿಂದ ವಾಹನಗಳು ಜಖಂಗೊಂಡ ಉದಾಹರಣೆಗಳು ಕೂಡ ಸಾಕಷ್ಟಿದೆ. ಈ ಭಾಗದಲ್ಲಿ ವಾಹನ ಸಂಚರಿಸುವ ಸಂದರ್ಭ ಗುಡ್ಡ ಹತ್ತುವ ಅನುಭವವಾಗಿದ್ದು, ಕಾರುಗಳ ಚಕ್ರಗಳು ಸಂಪೂರ್ಣ ಹೊಂಡದಲ್ಲಿ ಮುಳುಗಿ ಹೋಗುತ್ತದೆ

ಸ್ಥಳೀಯ ವಾಹನಗಳು ನಿತ್ಯವೂ ಮೂರ್‍ನಾಲ್ಕು ಬಾರಿ ಸಂಚರಿಸುವ ಸಂದರ್ಭ ಟೋಲ್ ಕಟ್ಟಿ ಸಾಗುವುದು ಹೊರೆಯಾಗುತ್ತದೆ ಎಂಬ ಕಾರಣಕ್ಕೆ ಸರ್ವೀಸ್ ರಸ್ತೆಗಳಿದ್ದು, ಆದರೆ ಈಗ ಇಂತಹ ರಸ್ತೆಯಲ್ಲಿ ಸಾಗುವುದಕ್ಕಿಂತ ಟೋಲ್ ಪಾವತಿಸಿ ಹೋಗುವುದೇ ಉತ್ತಮ ಎಂಬ ಸ್ಥಿತಿ ಇದೆ. ಆದರೆ ಸ್ಥಳೀಯ ವಾಹನಗಳು ಟೋಲ್ ಪಾವತಿಸಿ ಹೋಗುವುದು ಸಾಧ್ಯವಿದೆಯೇ ಎಂಬ ಪ್ರಶ್ನೆಯೂ ಹುಟ್ಟಿಕೊಳ್ಳುತ್ತದೆ.

ಘನ ವಾಹನಗಳು ಸರ್ವೀಸ್ ರಸ್ತೆಯಲ್ಲಿ ಸಾಗಿದ ಪರಿಣಾಮ ಈ ರೀತಿ ಹೊಂಡಗಳು ಉಂಟಾಗಿರುವ ಸಾಧ್ಯತೆ ಇದೆ. ಘನ ವಾಹನಗಳ ಚಕ್ರಗಳು ದೊಡ್ಡದಿರುವ ಕಾರಣದಿಂದ ಹೊಂಡಗಳಿದ್ದರೂ ದೊಡ್ಡ ಹೊಡೆತ ಸಿಗುವುದಿಲ್ಲ. ಆದರೆ ಕಾರು ಸೇರಿದಂತೆ ಇತರ ಸಣ್ಣ ವಾಹನಗಳು ಇದರಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿವೆ.

Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Recent Posts

ಬಿ.ಸಿ.ರೋಡ್ ನಲ್ಲಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ

ಕೆ.ಎನ್.ಆರ್. ಕನ್ಸಸ್ಟ್ರಕ್ಷನ್ಸ್ ಗುತ್ತಿಗೆ ವಹಿಸಿಕೊಂಡಿರುವ ಬಿ.ಸಿ.ರೋಡ್ ಭಾಗದ ಕಾಮಗಾರಿಯಲ್ಲಿ ಸೇತುವೆ ಪೂರ್ಣಗೊಳಿಸಿ ಓಡಾಟ ಆರಂಭಗೊಂಡಿರುವುದು ಮಹತ್ವದ ಹೆಜ್ಜೆಯಾಗಿದ್ದು, ಬಿ.ಸಿ.ರೋಡ್ ಸರ್ಕಲ್…

9 hours ago