2023-24 ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾಧವ ಪರವ ಅವರಿಗೆ ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ವತಿಯಿಂದ ಸಂಘದ ಪ್ರಧಾನ ಕಚೇರಿಯ ಬಿ.ಕೃಷ್ಣ.ರೈ ರೈತ ಸಭಾಂಗಣದಲ್ಲಿ ಗೌರವ ಪೂರ್ವಕವಾಗಿ ಅಭಿನಂದಿಸಲಾಯಿತು.
ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಮಾತನಾಡಿ, ಭೂತರಾಧನೆ, ದೈವಾರಾಧನೆ,ನಾಗರಾಧನೆ ಸೇರಿದಂತೆ ಜಾನಪದವಾಗಿ, ಸಂಪ್ರದಾಯಿಕ ವಿವಿಧ ವೈಶಿಷ್ಟತೆಯನ್ನು ಹೊಂದಿರುವ ಪರಶುರಾಮ ಸ್ರಷ್ಟಿಯ ತುಳುನಾಡ ಜಿಲ್ಲೆ ದಕ್ಷಿಣ ಕನ್ನಡ ಪ್ರಸಿದ್ದಿ ಪಡೆದಿದ್ದು ,ಜಾಗತಿಕ ಮಟ್ಟದ್ದಲ್ಲಿ ಗುರುತಿಸಿಕೊಂಡಿದೆ.ಈ ಹಿನ್ನೆಲೆಯಲ್ಲಿ ದೈವನರ್ತನೆ ಯಲ್ಲಿ ಹೆಸರು ವಾಸಿಯಾಗಿ ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಹಲವು ಪ್ರಸಿದ್ಧ ಕಾರಣಿಕ ದೈವಸ್ಥಾನಗಳಲ್ಲಿ ದೈವನರ್ತಕರಾಗಿ ಸೇವೆ ಸಲ್ಲಿಸಿಕೊಂಡು ಬಂದಿರುವ ಬಂಟ್ವಾಳ ತಾಲೂಕು ಸಂಗಬೆಟ್ಟು ಗ್ರಾಮ ಮಂಚಕಲ್ಲು ನಿವಾಸಿ ಮಾಧವ ಪರವ ಅವರಿಗೆ 2023-24 ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ ಎಂದರು.
ಅಭಿನಂದನೆ ಸ್ವೀಕರಿಸಿ ಮಾತಾನಾಡಿದ ಮಾಧವ ಪರವ ನನ್ನ ಹಿರಿಯರ ಕಾಲದಿಂದಲೂ ನಡೆಸಿಕೊಂಡು ಬಂದಿರುವ ದೈವನರ್ತನ ಸೇವೆಯನ್ನು ನಾನು ಪ್ರಾಮಾಣಿಕವಾಗಿ, ನಿಷ್ಠೆಯಿಂದ ಮುಂದುವರಿಸಿಕೊಂಡು ಬಂದಿರುತ್ತೇನೆ. ಈ ಪ್ರಶಸ್ತಿ ನಾನು ದೈವನರ್ತನೆ ಮಾಡುವ ಗ್ರಾಮಗಳಿಗೆ ದೊರೆತಂತಾಗಿದೆ ಎಂದರು.
ಸಂಘದ ಉಪಾಧ್ಯಕ್ಷ ಸತೀಶ್ ಪೂಜಾರಿ ಅಲಕ್ಕೆ, ನಿರ್ದೇಶಕರಾದ ಪದ್ಮರಾಜ್ ಬಲ್ಲಾಳ್ ಮಾವಂತೂರು, ಸಂದೇಶ ಶೆಟ್ಟಿ ಪೊಡುಂಬ, ರಾಜೇಶ್ ಶೆಟ್ಟಿ ಕೊನೆರಬೆಟ್ಟು, ಹರೀಶ್ ಆಚಾರ್ಯ ರಾಯಿ, ಉಮೇಶ್ ಗೌಡ, ದೇವರಾಜ್ ಸಾಲಿಯನ್,ಅರುಣ. ಎಸ್. ಶೆಟ್ಟಿ, ಜಾರಪ್ಪ ನಾಯ್ಕ,ಮಾಧವ ಶೆಟ್ಟಿಗಾರ್ ಉಪಸ್ಥಿತರಿದ್ದರು.ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆರತಿ ಶೆಟ್ಟಿ ಸ್ವಾಗತಿಸಿ, ವಂದಿಸಿದರು.