ಕೇರಳದ ಗಡಿ ಜಿಲ್ಲೆ ವಯನಾಡಿನಲ್ಲಿ ನಕ್ಸಲರು ಹಾಗೂ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ನಕ್ಸಲರು ಕರ್ನಾಟಕ ಗಡಿ ನುಸುಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ನಕ್ಸಲ್ ಚಟುವಟಿಕೆ ತೀವ್ರಗೊಂಡಿರುವ ಹಿನ್ನೆಲೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಗಡಿಭಾಗವಾದ ಬಿರುನಾಣಿ, ತೆರಾಳು, ಪರಕಟಗೆರೆ ಮತ್ತು ಕುಟ್ಟ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕೂಂಬಿಂಗ್ ಕಾರ್ಯಾಚರಣೆ ಕುರಿತು ಚರ್ಚಿಸಿದರು.ಕಳೆದ ವಾರವಷ್ಟೇ ಕೇರಳ ಗಡಿಯಲ್ಲಿ ಐವರು ನಕ್ಸಲರು ಹಾಗೂ ಕೇರಳ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದು ಇಬ್ಬರನ್ನು ಬಂಧಿಸಲಾಗಿತ್ತು.
ಕಾರ್ಯಾಚರಣೆ ವೇಳೆ ಓರ್ವ ನಕ್ಸಲ್ ಗಾಯಗೊಂಡಿರುವುದಾಗಿ ತಿಳಿದು ಬಂದಿದ್ದು, ಈತ ಚಿಕಿತ್ಸೆಗಾಗಿ ಅಥವಾ ರಕ್ಷಣೆಗಾಗಿ ಕೊಡಗು ಜಿಲ್ಲೆಯನ್ನು ಪ್ರವೇಶಿಸುವ ಸಾಧ್ಯತೆಗಳಿರುವುದರಿಂದ ಕೊಡಗು ಜಿಲ್ಲಾ ಪೊಲೀಸರು ಹೈಅಲರ್ಟ್ ಘೋಷಿಸಿದ್ದಾರೆ.
ಗುಂಡಿನ ಚಕಮಕಿ ನಡೆದ ಜಾಗಕ್ಕೂ ಕೊಡಗಿಗೂ ಕೇವಲ ನಾಲ್ಕೈದು ಕಿಲೋಮೀಟರ್ ಅಷ್ಟೇ ದೂರ. ನಕ್ಸಲರು ಕೇರಳದಿಂದ ಕೊಡಗು ಪ್ರವೇಶಿಸಬಹುದು ಎಂಬ ಶಂಕೆ ಪೊಲೀಸರಿಗೆ ಇದೆ. ಹೀಗಾಗಿ ಕೊಡಗಿನ ಗಡಿಭಾಗದಲ್ಲಿ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.
ಚೆಕ್ ಪೋಸ್ಟ್ ಗಳಲ್ಲಿ ಹೆಚ್ಚುವರಿಯಾಗಿ ಜಿಲ್ಲಾ ಸಶಸ್ತ್ರ ಪೊಲೀಸರನ್ನು ನಿಯೋಜಿಸಲಾಗಿದ್ದು, ಎಲ್ಲಾ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಗಡಿ ಭಾಗದ ಆಸ್ಪತ್ರೆ, ಮೆಡಿಕಲ್ ಶಾಪ್ ಮತ್ತು ಹೋಂಸ್ಟೇ ಗಳಿಗೂ ಎಚ್ಚರದಿಂದ ಇರುವಂತೆ ತಿಳಿಸಲಾಗಿದೆ. ಅಲ್ಲದೆ ಪೊಲೀಸರನ್ನು ನಿಯೋಜಿಸಿ ನಿಗಾ ಇರಿಸಲಾಗಿದೆ.