ನಿರಂತರವಾದ ಸಾಧನೆ, ಕಲಿಕೆ ಇದ್ದಾಗ ವಕೀಲವೃತ್ತಿಯಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಹೈಕೋರ್ಟ್ ನ್ಯಾಯಾಧೀಶ ರಾಜೇಶ್ ರೈ ಕಲ್ಲಂಗಳ ಹೇಳಿದರು.
ಶನಿವಾರ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಬಂಟ್ವಾಳ ವಕೀಲರ ಸಂಘ ವಿದ್ಯಾರ್ಥಿಗಳಿಗೆ ಮತ್ತು ವಕೀಲರಿಗೆ ಆಯೋಜಿಸಿದ ಕಾನೂನು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕಿರಿಯ ನ್ಯಾಯವಾದಿಗಳು ಕೋರ್ಟಿನ ಕಲಾಪಗಳಲ್ಲಿ ಭಾಗವಹಿಸುವುದರಿಂದ ತೊಡಗಿ, ಪ್ರತಿ ದಿನವೂ ವಿಷಯವನ್ನು ಅರಿತು ಅಧ್ಯಯನಶೀಲರಾದಾಗ ಮಾತ್ರ ವೃತ್ತಿಯಲ್ಲಿ ಯಶಸ್ಸು ಕಾಣಲು ಸಾಧ್ಯ. ವಿಧಾನಸೌಧದಲ್ಲಷ್ಟೇ ಅಲ್ಲ, ನ್ಯಾಯಾಲಯದಲ್ಲೂ ಸರಕಾರದ ಕೆಲಸ ದೇವರ ಕೆಲಸ ಎಂಬುದನ್ನು ನಾವು ಅಕ್ಷರಶಃ ಪಾಲಿಸುವುದು ಮುಖ್ಯ ಎಂದು ಹೇಳಿದ ಅವರು, ಹೊಸ ವಿಚಾರಗಳನ್ನು ಅರಿತುಕೊಂಡು ಕೆಲಸ ಮಾಡಿದರೆ, ವೃತ್ತಿಯಲ್ಲಿ ಮನ್ನಣೆ ಗಳಿಸಬಹುದು ಎಂದರು.
ಬಳಿಕ ಅವರು, ಪಾಟೀಸವಾಲುಗಳ ಕಲೆ ಎಂಬ ಕುರಿತು ವಿಚಾರಗೋಷ್ಠಿ ನಡೆಸಿಕೊಟ್ಟರು. ಸಾಕ್ಷಿಯ ವಿಚಾರಣೆ ಹಾಗೂ ಪಾಟಿಸವಾಲುಗಳು, ಸಾಕ್ಷಿಯ ಮರುಪರೀಕ್ಷೆ ಕುರಿತು ವಿಶ್ಲೇಷಿಸಿ, ಯಾವ ರೀತಿ ಪ್ರತಿಸವಾಲು ಹಾಕಬೇಕು ಎಂದು ವಿವರಿಸಿದರು.
ಭಾವನಾತ್ಮಕ, ವಿಮರ್ಶಾತ್ಮಕ ಕಲೆಯೂ ಮುಖ್ಯ ಎಂದ ಅವರು ಸಾಕ್ಷಿಗಳ ಚಾತುರ್ಯವನ್ನು ಅರಿತು ಅವರ ಆಂತರ್ಯವನ್ನು ಗಮನಿಸಿಕೊಂಡು ಪಾಟೀಸವಾಲು ಹಾಕಬೇಕಾಗುತ್ತದೆ ಎಂದರು. ಪಾಟೀಸವಾಲು ಮಾಡುವ ಸಂದರ್ಭ ಸಾಕ್ಷಿ ಜೊತೆ ಕಣ್ಣಲ್ಲಿ ಕಣ್ಣಿಟ್ಟು ಮಾತಾಡಬೇಕು, ಪ್ರಶ್ನೆ ಕೇಳುವ ವೇಳೆಯೂ ಜಾಗರೂಕರಾಗಿರಬೇಕು, ಸಾಕ್ಷಿಯ ಮನಸ್ಸನ್ನು ಗೆಲ್ಲುವ ಕೆಲಸವಾಗಬೇಕು, ನಾವು ಉದ್ವೇಗಕ್ಕೆ ಒಳಗಾಗಬಾರದು ಎಂದು ವಕೀಲರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಹೈಕೋರ್ಟ್ ಹಿರಿಯ ನ್ಯಾಯವಾದಿ ಡಾ.ಅರುಣ್ ಶಾಮ್ ಮಾತನಾಡಿ, ಕ್ರಿಮಿನಲ್ ಮತ್ತು ಸಿವಿಲ್ ಕೋರ್ಟ್ ಗಳಲ್ಲಿರುವ ಅಂತರ್ಗತ ಶಕ್ತಿಯ ಕುರಿತು ವಿಚಾರ ಮಂಡಿಸಿದರು. ಹೈಕೋರ್ಟ್ ನ್ಯಾಯವಾದಿ ಅನನ್ಯ ರೈ ಮಾತನಾಡಿ, ಲೀಗಲ್ ಸ್ಪೆಕ್ಟ್ರಮ್, ದಿ ಲಿಗೆಸಿ, ಸ್ಕೋಪ್ ಆಂಡ್ ರೆಸ್ಪಾನ್ಸಿಬಿಲಿಟಿ ಕುರಿತು ಮಾತನಾಡಿದರು. ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಪ್ರಥ್ವೀರಾಜ್ ರೈ ಮುಖ್ಯ ಅತಿಥಿಯಾಗಿ ಮಾತನಾಡಿ ಶುಭ ಹಾರೈಸಿದರು.
ಈ ಸಂದರ್ಭ ಕಾರ್ಯಕ್ರಮದಲ್ಲಿ ಬಂಟ್ವಾಳದ ಸೀನಿಯರ್ ಸಿವಿಲ್ ನ್ಯಾಯಾಧೀಶರಾದ ಭಾಗ್ಯಮ್ಮ, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಚಂದ್ರಶೇಖರ ತಳವಾರ ಉಪಸ್ಥಿತರಿದ್ದರು. ಬಂಟ್ವಾಳ ವಕೀಲರ ಸಂಘದ ವತಿಯಿಂದ ಹಿರಿಯ ನ್ಯಾಯವಾದಿಗಳಾದ ಅಶ್ವನಿ ಕುಮಾರ್ ರೈ, ಜತ್ತನಕೋಡಿ ಶಂಕರ ಭಟ್, ಪುಂಡಿಕಾಯ್ ನಾರಾಯಣ ಭಟ್, ವೆಂಕಟರಮಣ ಶೆಣೈ, ಮಿತ್ತೂರು ಈಶ್ವರ ಉಪಾಧ್ಯಾಯ ಉಪಸ್ಥಿತಿಯಲ್ಲಿ ಜಸ್ಟೀಸ್ ರಾಜೇಶ್ ರೈ ಕಲ್ಲಂಗಳ ಅವರನ್ನು ಸನ್ಮಾನಿಸಲಾಯಿತು. ಹೈಕೋರ್ಟ್ ಹಿರಿಯ ನ್ಯಾಯವಾದಿ ಡಾ. ಅರುಣ್ ಶಾಮ್ ಅವರನ್ನು ಗೌರವಿಸಲಾಯಿತು. ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ರಿಚಾರ್ಡ್ ಕೋಸ್ಟಾ ಎಂ. ಸ್ವಾಗತಿಸಿದರು. ನ್ಯಾಯವಾದಿ ರಾಮಚಂದ್ರ ಶೆಟ್ಟಿ ದಂಡೆ ವಂದಿಸಿದರು. ನ್ಯಾಯವಾದಿ ಕೆ.ಎನ್.ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು.