ವಿಜಯಪುರ ಮಂಗಳೂರು ಜಂಕ್ಷನ್ ನಡುವೆ 2019ರಲ್ಲಿ ಆರಂಭಿಸಿರುವ ನಂ.07377 ಮತ್ತು ನಂ.07378 ವಿಜಯಪುರ-ಮಂಗಳೂರು ಜಂಕಷನ್ ಎಕ್ಸ್ ಪ್ರೆಸ್ ವಿಶೇಷ ರೈಲಿನ ವೇಳಾಪಟ್ಟಿ ಪರಿಷ್ಕರಣೆ ಹಾಗೂ ರೈಲನ್ನು ಮಂಗಳೂರು ಸೆಂಟ್ರಲ್ ವರೆಗೆ ವಿಸ್ತರಣೆಗೆ ಆಗ್ರಹಿಸಿ ಸಹಿ ಸಂಗ್ರಹ ಅಭಿಯಾನ ಆರಂಭಗೊಂಡಿದೆ.
ಯಾಕೆ ಬೇಕು ಸಮಯ ಬದಲಾವಣೆ:
ಉತ್ತರ ಕರ್ನಾಟಕ ಮತ್ತು ಕರಾವಳಿ ಕರ್ನಾಟಕದ ಮಧ್ಯೆ ರೈಲು ಸಂಪರ್ಕ ಕಲ್ಪಿಸುತ್ತಿರುವ ವಿಜಯಪುರ ಮಂಗಳೂರು ರೈಲಿನ ವೇಳಾಪಟ್ಟಿ ಪರಿಷ್ಕರಣೆ ಹಾಗೂ ಮಂಗಳೂರು ಸೆಂಟ್ರಲ್ ವರೆಗೆ ಈ ರೈಲು ವಿಸ್ತರಣೆಗೆ ಆಗುವಂತೆ ಒತ್ತಾಯಿಸಿ ಹೋರಾಟಗಾರರು ಸಹಿ ಅಭಿಯಾನಕ್ಕೆ ಇಳಿಯಲು ಕಾರಣವೂ ಇದೆ.
ಪ್ರಸ್ತುತ ವಿಜಯಪುರದಿಂದ ಮಂಗಳೂರಿಗೆ ಸಂಚರಿಸುವ ರೈಲು ಸಂಖ್ಯೆ 07377 ವಿಜಯಪುರ ಮಂಗಳೂರು ಜಂಕ್ಷನ್ ಎಕ್ಸ್ ಪ್ರೆಸ್ ವಿಶೇಷ ರೈಲು, ವಿಜಯಪುರದಿಂದ ಪ್ರತಿದಿನ ಸಂಜೆ 6.35ಕ್ಕೆ ಹೊರಟು, ರಾತ್ರಿ 11.55ಕ್ಕೆ ಹುಬ್ಬಳ್ಳಿ ಜಂಕ್ಷನ್ ರೈಲು ನಿಲ್ದಾಣಕ್ಕೆ ತಲುಪುತ್ತದೆ. ಅಲ್ಲಿಂದ ರಾತ್ರಿ 12.05ಕ್ಕೆ ಹೊರಟು, ಮರುದಿನ ಮಧ್ಯಾಹ್ನ 12.40ಕ್ಕೆ ಮಂಗಳೂರು ಜಂಕ್ಷನ್ ತಲುಪುತ್ತದೆ. ಮಂಗಳೂರು ಜಂಕ್ಷನ್ ನಿಂದ ರೈಲು ಸಂಖ್ಯೆ 07378 ರೈಲು, ಮಧ್ಯಾಹ್ನ 2.55ಕ್ಕೆ ಹೊರಟು, ಮರುದಿನ ಬೆಳಗ್ಗೆ 9.35ಕ್ಕೆ ವಿಜಯಪುರ ತಲುಪುತ್ತದೆ. ಆದರೆ ಈ ಸಮಯ ಪ್ರಯಾಣಿಕರಿಗೆ ಅನಾನುಕೂಲ ಆಗಿದೆ. ಈ ಹಿನ್ನೆಲೆಯಲ್ಲಿ ಸಮಯ ಬದಲಾವಣೆ ಮಾಡುವಂತೆ ದಕ್ಷಿಣ ಕನ್ನಡ ಜಿಲ್ಲಾ ರೈಲ್ವೆ ಯಾತ್ರಿ ಸಂಘ ಸಹಿತ ಹೋರಾಟಗಾರರು ಬೇಡಿಕೆ ಇಟ್ಟಿದ್ದಾರೆ.
ಬಾಗಲಕೋಟೆ, ಗದಗ, ಹಾವೇರಿ, ದಾವಣಗೆರೆ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯರೋಡ್, ಕಬಕಪುತ್ತೂರು, ಬಂಟ್ವಾಳ ರೈಲ್ವೆ ನಿಲ್ದಾಣಗಳ ಮೂಲಕ ಹಾದುಹೋಗುವ ಈ ರೈಲು, ತನ್ನ ಮಾರ್ಗದ ಪ್ರಮುಖ ರೈಲು ನಿಲ್ದಾಣ, ಪಟ್ಟಣಗಳಲ್ಲಿ ನಿಲ್ಲುತ್ತದೆ. ಪ್ರತಿದಿನ ಸಾವಿರಾರು ಜನರನ್ನು ಕರಾವಳಿ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಜೊತೆ ಸಂಪರ್ಕ ಮಾಡುತ್ತದೆ. ಆದರೆ ರೈಲಿನ ವೇಳಾಪಟ್ಟಿ ಪರಿಷ್ಕರಣೆ ಜತೆಯಲ್ಲಿ ರೈಲು ಮಂಗಳೂರು ಸೆಂಟ್ರಲ್ ನಿಲ್ದಾಣದವರೆಗೂ ಸಂಚರಿಸಬೇಕು ಎಂದು ಪ್ರಯಾಣಿಕರು ಬೇಡಿಕೆ ಇತ್ತಿದ್ದಾರೆ. ಕಾರಣ ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣ ಮಂಗಳೂರು ಸಿಟಿಯಿಂದ ಹೊರಗಿದ್ದರೆ, ಮಂಗಳೂರು ಸೆಂಟ್ರಲ್ ನಿಲ್ದಾಣ ಮಂಗಳೂರು ಪೇಟೆಯೊಳಗೇ ಇದೆ. ವಿಜಯಪುರಕ್ಕೆ ತೆರಳುವ ಮಂದಿ ಬಹುತೇಕ ಕೂಲಿ ಕಾರ್ಮಿಕರಾಗಿದ್ದು, ಅವರಿಗೆ ದೂರದ ಮಂಗಳೂರು ಜಂಕ್ಷನ್ ಗೆ ಹೋಗಲು ಅನಾನುಕೂಲವೂ ಆಗುತ್ತದೆ. ಈ ಹಿನ್ನೆಲೆಯಲ್ಲಿ ಇದನ್ನು ಮಂಗಳೂರು ಸೆಂಟ್ರಲ್ ಗೆ ವಿಸ್ತರಿಸಬೇಕು ಎಂಬ ಬೇಡಿಕೆಯನ್ನೂ ಮಂಡಿಸಲಾಗಿದೆ.
ರೈಲ್ವೆ ಬಳಕೆದಾರರು ನೀಡಿದ ಸಮಯದ ಬದಲಾವಣೆಯ ರೀತಿ ಹೀಗಿದೆ. ವಿಜಯಪುರದಿಂದ ಸಂಜೆ 4 ಗಂಟೆಗೆ ಹೊರಟು, ರಾತ್ರಿ 9.30ಕ್ಕೆ ಹುಬ್ಬಳ್ಳಿ, ಬೆಳಗ್ಗೆ 9.30ಕ್ಕೆ ಮಂಗಳೂರು ಸೆಂಟ್ರಲ್ ತಲುಪಬೇಕು. ಸಂಜೆ 5 ಗಂಟೆಗೆ ಮಂಗಳೂರು ಸೆಂಟ್ರಲ್ ನಿಂದ ಹೊರಟು, ಮರುದಿನ ಬೆಳಗ್ಗೆ 5 ಗಂಟೆಗೆ ಹುಬ್ಬಳ್ಳಿ, ಬೆಳಗ್ಗೆ 10.30ಕ್ಕೆ ವಿಜಯಪುರ ತಲುಪುವಂತೆ ರೈಲಿನ ವೇಳಾಪಟ್ಟಿ ಪರಿಷ್ಕರಿಸಿದರೆ, ಪ್ರಯಾಣಿಕರಿಗೆ ಅನುಕೂಲ ಎಂಬುದು ಪ್ರಯಾಣಿಕರ ಅಭಿಪ್ರಾಯ. ಹೀಗಾಗಿ ಬಳಕೆದಾರರ ಸಂಘ ಇದಕ್ಕೆ ಹೆಚ್ಚು ಒತ್ತು ನೀಡಿದೆ. ಈ ಸಹಿ ಅಭಿಯಾನ ಈಗಾಗಲೇ ಆರಂಭವಾಗಿದ್ದು, ನವೆಂಬರ್ 15ರವರೆಗೆ ನಡೆಯಲಿದೆ. ಸಾರ್ವಜನಿಕರು ಆನ್ಲೈನ್ ಲಿಂಕ್ https://chng.it/PxXYGqrP ಅಥವಾ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ, ಈ ಸಹಿ ಅಭಿಯಾನದಲ್ಲಿ ಭಾಗಿಯಾಗಿ ಅಭಿಯಾನವನ್ನು ಬೆಂಬಲಿಸುವಂತೆ ಹೋರಾಟಗಾರರು ವಿನಂತಿಸಿದ್ದಾರೆ.