ಬ್ರಿಟಿಷರ ಕಾಲದ ಪಾಣೆಮಂಗಳೂರು ಹಳೆಯ ಸೇತುವೆ ರಸ್ತೆಯಲ್ಲಿ ಬಿರುಕು ಕಂಡ ಕಾರಣ, ಘನಗಾತ್ರದ ವಾಹನಗಳು ಸಂಚಾರ ಮಾಡಬಾರದು ಎಂದು ಹಾಕಲಾಗಿದ್ದ ಕಬ್ಬಿಣದ ತಡೆ ವಾಹನವೊಂದು ಡಿಕ್ಕಿ ಹೊಡೆದು ಶನಿವಾರ ಬೆಳಗ್ಗೆ ಕುಸಿದುಬಿದ್ದಿದೆ.
1914ರಲ್ಲಿ ನಿರ್ಮಿಸಲಾದ ಪಾಣೆಮಂಗಳೂರು ಸೇತುವೆಯ ರಸ್ತೆಯ ಮಧ್ಯ ಭಾಗದಲ್ಲಿ ಸಣ್ಣದಾದ ಬಿರುಕು ಕಂಡ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಲಾರಿ ಸಹಿತ ಇತರ ಘನವಾಹನಗಳು ಸಂಚಾರ ಮಾಡದಂತೆ ಬಂಟ್ವಾಳ ಪುರಸಭೆ ಸೇತುವೆಯ ಎರಡು ಬದಿಗಳಲ್ಲಿ ಕಬ್ಬಿಣದ ಪಿಲ್ಲರ್ ಗಳನ್ನು ಹಾಕಿ ಅದರ ಮೇಲೆ ಅಡ್ಡಲಾಗಿ ರಾಡ್ ಹಾಕುವ ಕಾರ್ಯ ಮಾಡಿತ್ತು.
ಆದರೆ ಸೇತುವೆ ಪ್ರವೇಶಕ್ಕೆ ಮೊದಲು ಘನಗಾತ್ರದ ವಾಹನಗಳ ನಿರ್ಬಂಧ ಮಾಡಲಾಗಿರುವ ಬಗ್ಗೆ ಯಾವುದೇ ಸೂಚನಾ ಫಲಕಗಳನ್ನು ಅಳವಡಿಸದ ಕಾರಣ, ಗೂಡ್ಸ್ ಟೆಂಪೋ ವೊಂದು ಸೇತುವೆಯಲ್ಲಿ ಸಂಚಾರ ಮಾಡಿದ ಸಂದರ್ಭ ರಾಡ್ ಕೆಳಕ್ಕುರಳಿ ಬಿದ್ದಿದೆ. ಅದೃಷ್ಟವಶಾತ್ ರಾಡ್ ಬೀಳುವ ವೇಳೆ ಹಿಂಬದಿಯಿಂದ ವಾಹನವಿಲ್ಲದ ಕಾರಣಕ್ಕಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ವಾಹನದ ಮೇಲ್ಬಾಗ ಡಿಕ್ಕಿಯಾದ ಪರಿಣಾಮ ರಾಡ್ ಕೆಳಗುರುಳಿದೆ. ಈ ಸಂದರ್ಭ ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಸ್ಥಳೀಯರು ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟ ಬಳಿಕ ಮತ್ತೆ ರಾಡ್ ನ್ನು ಮೇಲಕ್ಕೆ ಸಿಕ್ಕಿಸಿದ್ದಾರೆ. ಮತ್ತೆ ಘನಗಾತ್ರದ ವಾಹನಗಳು ಗೊತ್ತಿಲ್ಲದೆ ಸೇತುವೆಯಲ್ಲಿ ಸಂಚಾರ ಮಾಡಿ ಕಬ್ಬಿಣದ ರಾಡ್ ಮತ್ತೆ ಬೀಳುವ ಸಾಧ್ಯತೆಯೂ ಇದ್ದು, ಇಲ್ಲಿ ಸೇತುವೆ ಸಿಗುವ ಆರಂಭದಲ್ಲೇ ಎರಡೂ ಬದಿಗಳಲ್ಲಿ ಘನವಾಹನ ಸಂಚಾರ ನಿಷೇಧದ ಬೋರ್ಡ್ ಗಳನ್ನು ಹಾಕಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…