ಕಲ್ಲಡ್ಕ

ಮಾಣಿ ಮಠದಲ್ಲಿ ರಾಘವೇಶ್ವರ ಶ್ರೀಗಳಿಂದ ನವರಾತ್ರ ನಮಸ್ಯಾ ಪ್ರವಚನ ಆರಂಭ

ತ್ರಿಪುರಸುಂದರಿಯ ಉಪಾಸನೆ ಮಾಡುವವರಿಗೆ ಇಹ- ಪರಗಳೆರಡಲ್ಲೂ ಸುಖ ಕಟ್ಟಿಟ್ಟ ಬುತ್ತಿ. ಇದು ಮೋಕ್ಷಕ್ಕೆ ಸಾಧನ. ತ್ರಿಪುರಸುಂದರಿಯ ಆರಾಧನೆಗೆ ಸರ್ವ ದುಃಖ ಶಮನದ ಶಕ್ತಿ ಇದೆ ಎಂದು   ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.

ಜಾಹೀರಾತು

ಮಾಣಿ ಪೆರಾಜೆಯ ಶ್ರೀರಾಮಚಂದ್ರಾಪುರ ಮಠದಲ್ಲಿ ನವರಾತ್ರ ನಮಸ್ಯಾ ಅಂಗವಾಗಿ ‘ಶ್ರೀ ಲಲಿತೋಪಾಖ್ಯಾನ’ ಪ್ರವಚನ ಮಾಲಿಕೆಯ ಮೊದಲ ದಿನದ ಪ್ರವಚನವನ್ನು ಶ್ರೀಗಳು ಅನುಗ್ರಹಿಸಿದರು.

ಪಥಭ್ರಷ್ಟರು, ವರ್ಣವ್ಯವಸ್ಥೆಯನ್ನು ಧಿಕ್ಕರಿಸಿದವರು ಕೂಡಾ ತ್ರಿಪುರ ಸುಂದರಿಯ ಧ್ಯಾನ ಮಾಡಿದರೆ ಅಂಥವರ ಪಾಪಗಳು ಪುಣ್ಯಗಳಾಗಿ ಮಾರ್ಪಡುತ್ತವೆ. ವಿಧಿವತ್ತಾಗಿ ಮಾಡಲಾಗದೇ ಭಕ್ತಿಯಿಂದ ವಿಧಿಹೀನವಾಗಿ ಮಾಡಿದರೂ ಮುಕ್ತಿ- ಮೋಕ್ಷವನ್ನು ಪಡೆಯುತ್ತಾರೆ ಎಂದು ಬಣ್ಣಿಸಿದರು.

ಸ್ವಂತಕ್ಕೆ ಒತ್ತು ಕೊಡದಿದ್ದರೆ ಆತ ಸಂತ ಎನಿಸಿಕೊಳ್ಳುತ್ತಾನೆ. ತನಗಾಗಿ ಏನನ್ನೂ ಬೇಡದೇ ಲೋಕಕ್ಕಾಗಿ ಪ್ರಾರ್ಥಿಸುವವನು ನಿಜ ಅರ್ಥದಲ್ಲಿ ಸಂತ. ಅಗಸ್ತ್ಯರು ಜನಾರ್ದನನ ಕುರಿತು ತಪಸ್ಸು ಮಾಡಿ ಹಯಗ್ರೀವನ ರೂಪದಲ್ಲಿ ಪ್ರತ್ಯಕ್ಷವಾದ ಮಹಾವಿಷ್ಣುವನ್ನು ಲೋಕಹಿತದ ಮಾರ್ಗವನ್ನು ಅನುಗ್ರಹಿಸುವಂತೆ ಕೋರುತ್ತಾರೆ. ಕಷ್ಟ, ಕ್ಲೇಶದಿಂದ ಬಿಡುಗಡೆಯನ್ನು ಬೇಡುವ ದಾರಿಯೇ ಲಲಿತೋಪಾಖ್ಯಾನದ ಭಾಗವಾದ ಲಲಿತಾ ಸಹಸ್ರನಾಮ ಎಂದು ವಿವರಿಸಿದರು.

ಎಲ್ಲಕ್ಕೂ ಮೂಲ ಪ್ರಕೃತಿ ಮತ್ತು ಪುರುಷ. ಪ್ರಧಾನ (ಜೀವ) ಎನ್ನುವುದು ಪ್ರಕೃತಿಯಾದರೆ, ಅದರೊಳಗೆ ಇರುವ ಚೈತನ್ಯ ಪುರುಷಸ್ವರೂಪ. ಇದನ್ನು ತಿಳಿದುಕೊಂಡರೆ ಅದು ಮುಕ್ತಿಗೆ ದಾರಿ. ಈ ವಿವೇಕ ಯಾರಿಗೆ ಮೂಡುತ್ತದೆಯೋ ಆತ ಮುಕ್ತಿ ಪಡೆಯುತ್ತಾನೆ. ಮಹಾಶಕ್ತಿಯ ಧ್ಯಾನವೇ ಎಲ್ಲ ಕಷ್ಟಗಳಿಂದ ಮುಕ್ತಿ ಪಡೆಯುವ ದಾರಿ ಎಂದು ವಿವರಿಸಿದರು.

ಮಣ್ಣಿನಲ್ಲಿ ಬೇರೆ ಬೇರೆ ವಿಧಗಳಿದ್ದು, ಇವುಗಳ ಗುಣ, ಬಣ್ಣ, ಗಂಧ ಕೂಡಾ ಭಿನ್ನವಾಗಿರುತ್ತವೆ. ಅದಕ್ಕೆ ತಕ್ಕಂತೆ ಬೆಳೆಗಳು ಬೆಳೆಯುವಂತೆ ಕಾಲ ಕೂಡಾ ಭಿನ್ನವಾಗಿರುತ್ತದೆ. ಆಯಾ ಕಾಲಾವಧಿಯಲ್ಲಿ ಬೇರೆ ಬೇರೆ ದೇವರ ಅನುಗ್ರಹ ಕೂಡಾ ಇರುತ್ತದೆ. ಫಲ ಕೂಡಾ ಭಿನ್ನ. ದಶ ಆಹೋರಾತ್ರ ಎನ್ನುವುದು ದಸರಾ ಎಂದಾಗಿದೆ. ತಪಸ್ಸು, ಉಪಾಸನೆ ಮಾಡುವವರಿಗೆ ಇದರ ಮಹತ್ವ ತಿಳಿದಿರುತ್ತದೆ. ಈ ಅವಧಿಯಲ್ಲಿ ಉಪಾಸನೆಗೆ ವಿಶೇಷ ಫಲವಿದೆ ಎಂದು ಬಣ್ಣಿಸಿದರು.

ಹಳೆಯ ಪದ್ಧತಿಯ ಪುನರುಜ್ಜೀವನವೇ ನವರಾತ್ರಿಯ ವಿಶೇಷ. ಇದು ದೇವಭೂಮಿ. ಗುರುಗಳ ಸಂಚಾರದಿಂದ ಆರಂಭವಾಗಿ ಮಠ ನಿರ್ಮಾಣ, ಮಹಾಪಾದುಕಾಪೂಜೆ, ಬ್ರಹ್ಮಕಲಶೋತ್ಸವದ ಬಳಿಕ ಇದೀಗ ರಾಜರಾಜೇಶ್ವರಿಯ ಅನುಗ್ರಹವಾಗಿದೆ. ನವರಾತ್ರದಲ್ಲಿ ಮನಸ್ಸು, ಮಾತು ಮತ್ತು ಕಾಯ ಹೀಗೆ ತ್ರಿಕರಣಪೂರಕವಾಗಿ ಮಾಡುವ ಪೂಜೆಗೆ ವಿಶೇಷ ಫಲವಿದೆ ಎಂದು ಹೇಳಿದರು.

ಮಾನಸ ಜಪ, ಮಾನಸ ಪೂಜೆಗೆ ವಿಶೇಷ ಮಹತ್ವವಿದೆ. ವಾಕ್ಯ ಪುಷ್ಪೋಪಹಾರ. ಲಲಿತೋಪಾಖ್ಯಾನ ಎಂದರೆ ಮಾತೆ ಕೊಟ್ಟ ಮಾತಿನಿಂದ ಮಾತೆಯ ಅರ್ಚನೆ. ಲಲಿತೋಪಾಖ್ಯಾನದ ಮೂಲ ಬ್ರಹ್ಮಾಂಡ. ಬ್ರಹ್ಮಾಂಡ ಪುರಾಣದ ಉತ್ತರ ಖಂಡದಲ್ಲಿ ಲಲಿತೋಪಾಖ್ಯಾನದ ವರ್ಣನೆ ಇದೆ. ಲಲಿತಾ ಸಹಸ್ರನಾಮ, ಇದರ ಒಂದು ಭಾಗ. ಅಷ್ಟೋತ್ತರದ ಮೂಲಕ ಇಂಥ ಅದ್ಭುತ ವರ್ಣನೆಯನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ ಎಂದು ವಿಶ್ಲೇಷಿಸಿದರು.

ರಸವತ್ತಾದ, ಕಾವ್ಯಮಯವಾದ ನಾಮಸಂಪದದ ಬಗ್ಗೆ ಈ ಪ್ರವಚನ ನಡೆಯುತ್ತಿದೆ. ಯಾವುದೇ ಮಂತ್ರ ಯಾರಿಂದ ಬಂತೋ ಅದನ್ನು ಸ್ಮರಿಸದಿದ್ದರೆ, ಆ ಮಂತ್ರಕ್ಕೆ ಫಲ ಇಲ್ಲ. ಒಂದು ವಿಷಯದ ವಿಶ್ವಾಸಯೋಗ್ಯತೆ ನಿರ್ಣಯವಾಗುವುದು ಕೂಡಾ ಅದು ಎಲ್ಲಿಂದ ಬಂದದ್ದು ಎನ್ನುವುದ ಆಧಾರದಲ್ಲಿ. ಶಂಖದಿಂದ ಬಂದರೆ ಮಾತ್ರ ತೀರ್ಥವಾಗುತ್ತದೆ. ಸಂಕಲ್ಪದಿಂದ, ಗುರುಹಸ್ತದಿಂದ ಬಂದಂಥ ಅಕ್ಕಿ ಮಂತ್ರಾಕ್ಷತೆಯಾಗುವಂತೆ ಯೋಗ್ಯತೆ ನಿರ್ಧಾರವಾಗುವುದು ಅದರ ಮೂಲದಿಂದ ಎಂದು ಹೇಳಿದರು.

ಲಲಿತೋಪಾಖ್ಯಾನ ಹಯಗ್ರೀವನಿಂದ ಬಂದದ್ದು. ವಿದ್ಯಾಧಿರಾಜ ನಾರಾಯಣನಿಂದ ಬಂದಿರುವಂಥದ್ದು. ಆತನ ಜ್ಞಾನದಿಂದ ಬರುವ ಆನಂದದ ಸ್ವರೂಪ ಇದು. ಇದನ್ನು ಶ್ರೀವಿದ್ಯೆ ಎಂದೂ ಕರೆಯುತ್ತಾರೆ. ದಯೆಯ ನಿಧಿ, ಇಡೀ ಜೀವಸಂಕುಲದ ಸಂರಕ್ಷಕನಿಂದ ಬಂದ ಅಪೂರ್ವ ನಿಧಿ ಎಂದರು.

ವಿಷ್ಣು ಮತ್ತು ಲಲಿತೆ ಅಂದರೆ ತ್ರಿಪುರ ಸುಂದರಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ತ್ರಿಪುರಸುಂದರಿಯ ಇಡೀ ಆಖ್ಯಾನವನ್ನು ಜಗತ್ತಿಗೆ ನೀಡಿದವನು ಮಹಾವಿಷ್ಣು. ಎಂಥ ದೋಷವನ್ನೂ ಜೀರ್ಣ ಮಾಡಿಕೊಳ್ಳಬಲ್ಲ ಮಹಾನ್ ತೇಜಸ್ವಿಯಾದ ಅಗಸ್ತ್ಯರಿಗೆ ಇದನ್ನು ಅನುಗ್ರಹಿಸಿದರು. ಅಗಸ್ತ್ಯರಿಗೂ ಶ್ರೀರಾಮನಿಗೂ, ಶ್ರೀಮಠಕ್ಕೂ ಅವಿನಾಭಾವ ಸಂಬಂಧ. ಅವರ ಶಿಷ್ಯಪರಂಪರೆಯ ಮೂಲಕ ಶಂಕರಾಚಾರ್ಯರಿಗೆ, ಶ್ರೀಮಠಕ್ಕೆ ಅನುಗ್ರಹಿತವಾದದ್ದು ರಾಜರಾಜೇಶ್ವರಿಯ ಸನ್ನಿಧಿ ಎಂದು ವಿವರಿಸಿದರು.

ಮಹಾತ್ಮರು ಯಾವುದೇ ಹೆಜ್ಜೆ ಇಟ್ಟರೂ, ಅದರ ಹಿಂದೆ ಮಹತ್ವದ ಉದ್ದೇಶ ಇರುತ್ತದೆ. ಅಂತೆಯೇ ಜನತೆ ಕೂಡಾ ತಮ್ಮ ಜೀವನದಲ್ಲಿ ಪ್ರತಿ ಹೆಜ್ಜೆ ಇಡುವಾಗ ಮುಂದಿನದ್ದನ್ನು ಊಹಿಸಬೇಕು. ಅಂತೆಯೇ ಅಗಸ್ತ್ಯರ ಲೋಕಸಂಚಾರಕ್ಕೆ ವಿಶೇಷ ಅರ್ಥವಿತ್ತು. ಜೀವಸಂಕುಲಕ್ಕೆ ಒಳ್ಳೆಯದು ಮಾಡಬೇಕು ಎಂಬ ಇಚ್ಛೆ ಇತ್ತು. ಅವರ ಲೋಕಸಂಚಾರದ ವೇಳೆ ಕಂಡುಬಂದದ್ದು ಜನರ ನೋವು- ಆಕ್ರಂದನ. ನೋವಿಲ್ಲದವರು ಯಾರೂ ಇಲ್ಲ ಎಂಬ ಕಾರಣಕ್ಕೆ ಪರಮಕಾರುಣ್ಯದಿಂದ ಇದನ್ನು ಅನುಗ್ರಹಿಸರು ಎಂದು ಹೇಳಿದರು.

ಶಿವ-ಶಿವೆಯರ ಸನ್ನಿಧಾನವಾದ ಕಾಂಚಿಗೆ ಆಗಮಿಸಿದ ಅಗಸ್ತ್ಯರು ಶಿವದರ್ಶನ, ಕಾಮಾಕ್ಷಿಯ ಅರ್ಚನೆ ಬಳಿಕ ಜನಾರ್ದನನ ಕುರಿತು ತಪ್ಪು ಆರಂಭಿಸಿದರು. ಆಗ ಜನಾರ್ದನ ಹಯಗ್ರೀವನ ರೂಪದಲ್ಲಿ ಪ್ರತ್ಯಕ್ಷವಾಗುತ್ತಾನೆ. ಒಂದು ಮಹಾನ್ ವಿದ್ಯೆಯ ಆವೀರ್ಭವ ಜಗತ್ತಿಗೆ ಆಗಲಿದೆ ಎಂಬ ಸಂಕೇತವನ್ನು ನೀಡುತ್ತಾರೆ. ಆಗ ಲೋಕದ ಚಿಂತೆ, ಕಷ್ಟಗಳಿಂದ ಮುಕ್ತಿ ಪಡೆಯುವ ದಾರಿ ಅನುಗ್ರಹಿಸಬೇಕು ಎಂಬ ವರವನ್ನು ಅಗಸ್ತ್ಯರು ಬೇಡಿದರು.

ಮಾಣಿಮಠ ಸಮಿತಿ ಅಧ್ಯಕ್ಷ ಹಾರಕೆರೆ ನಾರಾಯಣ ಭಟ್, ಉದ್ಯಮಿ ಎಸ್.ಕೆ.ಆನಂದ್, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಮಿತ್ತೂರು, ವಿದ್ಯಾರ್ಥಿ ಪ್ರಧಾನ ಈಶ್ವರ ಪ್ರಸಾದ್ ಕನ್ಯಾನ, ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಸಂಘಟನಾ ಖಂಡದ ಸಂಯೋಜಕ ಡಾ.ವೈ.ವಿ.ಕೃಷ್ಣಮೂರ್ತಿ, ಉಪ್ಪಿನಂಗಡಿ ಮಂಡಲ ಅಧ್ಯಕ್ಷ ಈಶ್ವರ ಪ್ರಸನ್ನ ಪೆರ್ನೆಕೋಡಿ, ಕಾರ್ಯದರ್ಶಿ ಮಹೇಶ್ ಕುದುಪುಲ, ಮಂಗಳೂರು ಮಂಡಲ ಉಪಾಧ್ಯಕ್ಷ ರಾಜಶೇಖರ ಕಾಕುಂಜೆ, ಉಂಡೆಮನೆ ವಿಶ್ವೇಶ್ವರ ಭಟ್ ಮತ್ತಿತರರು ಉಪಸ್ಥಿತರಿದ್ದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.