ಹೆದ್ದಾರಿ ಇರೋದೇ ಸ್ಪೀಡಾಗಿ ಹೋಗೋದಕ್ಕೆ ಎನ್ನುವವರಿಗೊಂದು ಕಿವಿಮಾತು. ನೀವು ಸ್ಪೀಡಾಗಿ ಹೋಗಿ. ಆದರೆ ಅಲ್ಲಿ ನಡ್ಕೊಂಡು ಹೋಗುವವರು ಇರ್ತಾರೆ ಎಂಬುದನ್ನು ಮರೀಬೇಡಿ. ಹಾಗೆಯೇ ನಡೆದುಕೊಂಡು ಹೋಗುವವರೂ ಅಷ್ಟೇ.. ಶಾರ್ಟ್ ಕಟ್ ಎಂದು ರಸ್ತೆ ದಾಟಲು ಹೋಗಬೇಡಿ, ಹಾಗೂ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ದಯವಿಟ್ಟು ನಿಮ್ಮ ಕಣ್ಣು ರಸ್ತೆ ಮೇಲಿರಲಿ. ಏಕೆಂದರೆ ಯಾವಾಗ ವಾಹನ ಮೈಮೇಲೆ ಎರಗುತ್ತೋ ದೇವನೇ ಬಲ್ಲ. ದುರಂತ ಎಲ್ಲೆಲ್ಲಿ ಕಾದಿರುತ್ತೋ ಗೊತ್ತಾಗೋದೇ ಇಲ್ಲ.
ಬಂಟ್ವಾಳ ಟ್ರಾಫಿಕ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಆಕ್ಸಿಡೆಂಟ್ ಪ್ರಕರಣಗಳು ಜಾಸ್ತಿಯಾಗತೊಡಗಿದೆ. ಸೀಮಿತ ಸಿಬಂದಿ ಇರುವ ಪೊಲೀಸರು ಟ್ರಾಫಿಕ್ ಜಾಮ್ ಜೊತೆಗೆ ಆಯಕಟ್ಟಿನ ಜಾಗದಲ್ಲಿ ಅಪಘಾತ ತಡೆಗೆ ಹರಸಾಹಸಪಡುತ್ತಿರುತ್ತಾರೆ. ಆದರೂ ವಾಹನಗಳ ಚಾಲನೆ ವೇಳೆ ಗಮನ ಇಲ್ಲದಿರುವುದು, ರಸ್ತೆ ಸುರಕ್ಷತಾ ಉಲ್ಲಂಘನೆಗಳಿಂದ ವಾಹನ ಅಪಘಾತಗಳು ಜಾಸ್ತಿಯಾಗುತ್ತಿವೆ.
ಇತ್ತೀಚೆಗೆ ಸೇತುವೆ ಮೇಲೆಯೇ ಅಪಘಾತವಾಗಿ ಒಬ್ಬರು ಸಾವನ್ನಪ್ಪಿದ್ದರು. ಪೂರ್ಲಿಪ್ಪಾಡಿ, ದಾಸಕೋಡಿ ಪರಿಸರ ಹಾಗೆಯೇ ಬಂಟ್ವಾಳದಿಂದ ಮೂಡುಬಿದಿರೆಗೆ ತಿರುಗುವ ತುಂಬ್ಯ ಜಂಕ್ಷನ್ (ಬಂಟ್ವಾಳ ಜಂಕ್ಷನ್), ಕಾಮಾಜೆ ತಿರುವು, ಪುರಸಭೆಯ ನೆರೆ ವಿಮೋಚನಾ ರಸ್ತೆಗೆ ತಿರುವು, ಭಂಡಾರಬೆಟ್ಟು, ಚಂಡ್ತಿಮಾರ್ ಸಹಿತ ಕೂಡುರಸ್ತೆಗಳು ಸೇರುವ ಜಾಗ ಹಾಗೂ ವಿಶಾಲವಾದ ರಸ್ತೆ ಇರುವ ಪ್ರದೇಶಗಳಲ್ಲೆಲ್ಲಾ ಅಪಘಾತಗಳು ಸಂಭವಿಸಿದ್ದು, ಇತ್ತೀಚಿನ ಕೆಲ ತಿಂಗಳ ಹಿಂದೆ ಬಂಟ್ವಾಳ ಪುಂಜಾಲಕಟ್ಟೆ ರಸ್ತೆಯ ಬಂಟ್ವಾಳ ಪೇಟೆಗೆ ತಿರುಗುವ ಜಾಗದಲ್ಲಿ ರಬ್ಬರ್ ಸ್ಟ್ರಿಪ್ ಗಳನ್ನು ಹಾಕಿ ವೇಗಕ್ಕೆ ಕಡಿವಾಣ ಹಾಕಲಾಗುತ್ತಿದೆಯಾದರೂ ಅದು ಪರಿಣಾಮಕಾರಿಯಾಗಿಲ್ಲ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಶರವೇಗದಿಂದ ವಾಹನಗಳು ಓಡಾಡುವುದು ಸಹಜ. ಆದರೆ ಎಷ್ಟು ವೇಗದಲ್ಲಿ ಓಡಬೇಕು ಎಂಬ ಕುರಿತು ಮಾರ್ಗಸೂಚಿ ಫಲಕಗಳನ್ನು ಹೆದ್ದಾರಿ ಪ್ರಾಧಿಕಾರ ಹಾಕಬೇಕು. ಬಿ.ಸಿ.ರೋಡ್ ನಿಂದ ಮಾಣಿವರೆಗಿನ ಹೆದ್ದಾರಿಯಲ್ಲಿ ವೇಗಮಿತಿಯ ಫಲಕಗಳು ಕಾಣಿಸುತ್ತಿಲ್ಲ.
ರಾಷ್ಟ್ರೀಯ ಹೆದ್ದಾರಿಯ ನಿರ್ದಿಷ್ಟ ಜಾಗಗಳಾದ ಜಂಕ್ಷನ್ ನಂಥ ಪ್ರದೇಶಗಳಲ್ಲಿ ಹಂಪ್ಸ್ ರೀತಿಯ ವೇಗತಡೆಗಳು ಅಗತ್ಯ. ಹಾಸನ ಬೆಂಗಳೂರು ರಸ್ತೆಯ ಹಲವೆಡೆ ಈ ರೀತಿಯ ಹಂಪ್ಸ್ ಗಳಿವೆ. ಇದು ಜನನಿಬಿಡ ಪ್ರದೇಶಗಳಲ್ಲಿ ವೇಗವಾಗಿ ಸಂಚರಿಸುವುದನ್ನು ನಿಯಂತ್ರಿಸುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.