ತೆಂಕುತಿಟ್ಟು ಯಕ್ಷಗಾನವು ಈವರೆಗೆ ಹಲ ಕೆಲವು ತಿರುವುಗಳನ್ನು ಪಡೆದುಕೊಳ್ಳುವುದರೊಂದಿಗೆ, ಕೆಲವು ಪ್ರಮುಖ ಅಂಶಗಳನ್ನು ಕಳಕೊಂಡದ್ದೂ ಇದೆ. ಈ ಸಾಲಿನಲ್ಲಿ ರಾಮಾಯಣ ಪ್ರಸಂಗದ ವಾಲಿ ಹಾಗೂ ಸುಗ್ರೀವರ ಒಡ್ಡೋಲಗವೂ ಒಂದು. ಸುಮಾರು 1950ನೇ ಇಸವಿಯಿಂದ ರಂಗವೇರದ ಈ ಒಡ್ಡೋಲಗ ಕ್ರಮವು ಅಳಿಯುವ ಅಂಚಿನಲ್ಲಿತ್ತು. ಇದರ ಗಂಭೀರತೆಯನ್ನು ಮನಗಂಡ ಯಕ್ಷಗಾನ ಚಿಂತಕ ರಾಜಗೋಪಾಲ್ ಕನ್ಯಾನ ಅವರು ಈ ಕುರಿತು ಅಧ್ಯಯನ ಸಂಶೋಧನೆಗಳನ್ನು ನಡೆಸಿ ಅದರ ದಾಖಲಾತಿಗಾಗಿ ಶ್ರಮಿಸಿದರು.
ರಾಷ್ಟ್ರಪ್ರಶಸ್ತಿ ವಿಜೇತ ಹಿರಿಯ ಕಲಾವಿದ ಕೆ.ಗೋವಿಂದ ಭಟ್ ಸೂರಿಕುಮೇರಿಯವರ ಮಾರ್ಗದರ್ಶನ ಹಾಗೂ ನಿರ್ದೇಶನದಲ್ಲಿ ಇತ್ತೀಚೆಗೆ ಇದರ ಪಾರಂಪರಿಕ ಪ್ರದರ್ಶನದ ಮೂಲಕ ವೀಡಿಯೋ ಚಿತ್ರೀಕರಣ ಮಾಡಿದರು. ಗೋವಿಂದ ಭಟ್ಟರ ಶಿಷ್ಯ ಧರ್ಮೇಂದ್ರ ಆಚಾರ್ಯ ಕೂಡ್ಲು ಹಾಗೂ ಅವರ ಶಿಷ್ಯವೃಂದದವರು ಇದರಲ್ಲಿ ಸಂಪನ್ಮೂಲ ಕಲಾವಿದರಾಗಿ ಭಾಗವಹಿಸಿದ್ದಾರೆ.
ಹಿಮ್ಮೇಳದಲ್ಲಿ ಭಾಗವತರಾಗಿ ತಲ್ಪನಾಜೆ ವೆಂಕಟ್ರಮಣ ಭಟ್, ಮದ್ದಳೆವಾದನದಲ್ಲಿ ಲಕ್ಷ್ಮೀಶ ಬೇಂಗ್ರೋಡಿ ಹಾಗೂ ಶುಭಶರಣ ತಾಳ್ತಜೆ, ಚೆಂಡೆವಾದನದಲ್ಲಿ ಮುರಾರಿ ಕಡಂಬಳಿತ್ತಾಯ ಮಂಗಳೂರು ಹಾಗೂ ಚಕ್ರತಾಳದಲ್ಲಿ ಕಿರಣ್ ಕುದ್ರೆಕೋಡ್ಳು ಸಹಕರಿಸಿದ್ದಾರೆ.
ಯಕ್ಷಗಾನ ಪರಂಪರೆಯ ‘ವಾಲಿ – ಸುಗ್ರೀವರ ಒಡ್ಡೋಲಗ’ ದಾಖಲೀಕರಣದ ಈ ವೀಡಿಯೋವನ್ನು ಮಧುಸೂದನ ಅಲೆವೂರಾಯರ ಪ್ರಸಿದ್ಧ ಯೂಟ್ಯೂಬ್ ಚಾನೆಲಿನ ಮೂಲಕ ಅಕ್ಟೋಬರ್ 19, 2023ನೇ ಗುರುವಾರದಂದು ಬೆಳಗ್ಗೆ ಗಂಟೆ 10.30ಕ್ಕೆ ಮಂಗಳೂರಿನ ಪ್ರೆಸ್ ಕ್ಲಬ್ಬಿನಲ್ಲಿ ಬಿಡುಗಡೆ ಆಗಲಿದೆ. ಕಸಾಪದ ಮಾಜಿ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಬಿಡುಗಡೆ ಮಾಡುವರು.
ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಅರ್ಥಧಾರಿ ಭಾಸ್ಕರ ರೈ ಕುಕ್ಕುವಳ್ಳಿ ಅವರು ವಹಿಸುವರು. ಮುಖ್ಯ ಅತಿಥಿಗಳಾಗಿ ವಿದುಷಿ , ಮಂಗಳೂರು ನಾಟ್ಯ ಹಾಗೂ ಯಕ್ಷರಾಧನಾ ಕಲಾಕೇಂದ್ರ ದ ನಿರ್ದೇಶಕಿ ಸುಮಂಗಲಾ ರತ್ನಾಕರ್ ಭಾಗವಹಿಸುವರು. ಈ ವೀಡಿಯೋ ದಾಖಲೀಕರಣದ ನಿರ್ದೇಶಕ ಕೆ.ಗೋವಿಂದ ಭಟ್ ಹಾಗೂ ಸಂಶೋಧಕ- ಸಂಯೋಜಕ ಕೆ.ಪಿ.ರಾಜಗೋಪಾಲ್ ಕನ್ಯಾನ ಅವರು ಉಪಸ್ಥಿತರಿರುವರು.