ಕಾರು ಡಿಕ್ಕಿಯಾಗಿ ಪಾದಚಾರಿ ಯುವತಿಯೋರ್ವಳು ಸಾವನ್ನಪ್ಪಿದ ಘಟನೆ ಗುರುವಾರ ಸಂಜೆ ಕಲ್ಲಡ್ಕ ಸಮೀಪ ದಾಸಕೋಡಿ ಎಂಬಲ್ಲಿ ನಡೆದಿದೆ. ಬಾಯಿಲ ನಿವಾಸಿ ಶೇಖರ ಪೂಜಾರಿ ಅವರ ಪುತ್ರಿ ಪಾವನಾ (23) ಮೃತಪಟ್ಟವರು.
ಇವರು ಬಿ.ಸಿ.ರೋಡಿನ ಸ್ಕ್ಯಾನಿಂಗ್ ಸೆಂಟರ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿ, ಮನೆಗೆ ಮರಳುತ್ತಿದ್ದ ವೇಳೆ ದಾಸಕೋಡಿ ಎಂಬಲ್ಲಿ ಬಸ್ಸಿನಿಂದ ಇಳಿದು ನಡೆದುಕೊಂಡು ಹೋಗುತ್ತಿರುವ ವೇಳೆ ಕಾರೊಂದು ಡಿಕ್ಕಿ ಹೊಡೆದಿದೆ. ಸಂಜೆ ಸುಮಾರು 6.30ರ ವೇಳೆ ಈ ಘಟನೆ ನಡೆದಿದೆ. ಢಿಕ್ಕಿಯ ರಭಸಕ್ಕೆ ಯುವತಿ ರಸ್ತೆ ಬದಿಯ ತೋಡಿಗೆ ಎಸೆಯಲ್ಪಟ್ಟಿದ್ದು, ಕಾರು ಕೂಡ ಪಲ್ಟಿಯಾಗಿದೆ. ಯುವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಗಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿಡಲಾಗಿದೆ. ಘಟನಾ ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೋಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾಂಕ್ರೀಟ್ ರಸ್ತೆಯಲ್ಲಿ ಅತೀ ವೇಗದ ಚಾಲನೆ ಅಪಘಾತಕ್ಕೆ ಕಾರಣವಾಗುತ್ತಿದೆ ಎಂಬ ಆರೋಪ ಸ್ಥಳೀಯರಿಂದ ಕೇಳಿಬಂದಿದೆ.