ಕಳೆದ ಕೆಲ ದಿನಗಳಿಂದ ಸಂಜೆ ವೇಳೆ ಮಳೆಯಾಗುತ್ತಿದ್ದು, ಗುಡುಗು, ಸಿಡಿಲಿನ ಅಬ್ಬರವೂ ಕಂಡುಬರುತ್ತಿದೆ. ಬಂಟ್ವಾಳ ತಾಲೂಕಿನಲ್ಲಿ ಹಲವೆಡೆ ಹಾನಿಗಳು ಸಂಭವಿಸಿದ್ದು, ಸುರಿಬೈಲು: ಅಬ್ದುಲ್ ಕಾದರ್ ಮನೆಗೆ ಸಿಡಿಲಾಘಾತದಿಂದಾಗಿ ಮಾಡು ಕುಸಿದು ಮನೆ ಬಿರುಕುಬಿಟ್ಟಿದೆ. ಸುಮಾರು 7 ಲಕ್ಷ ರೂ ನಷ್ಟವಾಗಿರುವ ಕುರಿತು ಅಂದಾಜಿಸಲಾಗಿದೆ.
ರಾತ್ರಿ ಸುಮಾರು 9 ಗಂಟೆಯ ವೇಳೆ ಭಾರಿ ಸದ್ದಿನೊಂದಿಗೆ ಸಿಡಿಲು ಬಡಿದಿದ್ದು ಮನೆಯ ಮಾಡು ಕುಸಿದಿದೆ. ಹೆಂಚು ಪಕ್ಕಾಸು ರೀಪು ಸಹಿತ ಮನೆ ಮಾಡಿಗೆ ಪೂರ್ಣ ಪ್ರಮಾಣದ ಹಾನಿಯಾಗಿದ್ದು ಗೋಡೆ ಬಿರುಕು ಬಿಟ್ಟಿದೆ. ಇದೆ ವೇಳೆ ವಿದ್ಯುತ್ ವ್ಯವಸ್ಥೆ ಸಂಪೂರ್ಣ ಹಾನಿಗೀಡಾಗಿದೆ. ರೆಫ್ರಿಜರೇಟರ್ ಟಿವಿ ವಾಷಿಂಗ್ ಮಷೀನ್ ಇನ್ವರ್ಟರ್ ಗಳು ಹಾಳಾಗಿವೆ. ವಿದ್ಯುತ್ ಬೋರ್ಡ್ ಸಹಿತ ವೈರ್ ಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಸಿಡಿಲು ಬಡಿಯುವಾಗ ಮನೆಮಂದಿಯೆಲ್ಲಾ ಚಾವಡಿಯಲ್ಲಿದ್ದು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಕನಿಷ್ಠ 7 ಲಕ್ಷ ರೂಪಾಯಿಗಿಂತಲೂ ಅಧಿಕ ನಷ್ಟವಾಗಿದ್ದು ಕುಟುಂಬ ಸರ್ಕಾರದ ಪರಿಹಾರವನ್ನು ನೀರಿಕ್ಷಿಸುತ್ತಿದೆ. ಪಂಚಾಯಿತಿ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದ್ದಾರೆ.
ಸಜೀಪಮುನ್ನೂರು ಗ್ರಾಮದ ಆಲಾಡಿ ಎಂಬಲ್ಲಿ ಅಬ್ದುಲ್ ರಝಾಕ್ ಮನೆಗೆ ಸಿಡಿಲು ಬಡಿದು ಹಾನಿಯಾಗಿದೆ.. ಸಾಲೆತ್ತೂರು ಮೆದು ಕೂಡುರಸ್ತೆ ಹಮೀದ್ ಮನೆಗೆ ಸಿಡಿಲು ಬಡಿದು ಹಾನಿಯಾಗಿದೆ.
ಇಡ್ಕಿದು ಗ್ರಾಮದ ಅರ್ಕೆಚಾರು ಎಂಬಲ್ಲಿ ತೋಮಸ್ ಎಂಬವರ ವಾಸ್ತವ್ಯದ ಮನೆಗೆ ಸಿಡಿಲು ಬಡಿದು ಭಾಗಶಃ ಹಾನಿಯಾಗಿರುತ್ತದೆ. ಬಾಳ್ತಿಲ ಗ್ರಾಮದ ಸುಧೆಕಾರು ಎಂಬಲ್ಲೀ ಶೀನ ಅವರ ಮನೆಯ ವಿದ್ಯುತ್ ಸಂಪರ್ಕಕ್ಕೆ ಸಿಡಿಲು ಬಡಿದು ಹಾನಿಯಾಗಿರುವುದಾಗಿ ಕಂದಾಯ ಇಲಾಖೆ ಮಾಹಿತಿ ನೀಡಿದೆ.