ತೋಟಗಾರಿಕೆ ಇಲಾಖೆ ಬಂಟ್ವಾಳ ಹಾಗೂ ತಾಲೂಕು ಪಂಚಾಯತ್ ಬಂಟ್ವಾಳ ಇವರ ಜಂಟಿ ಆಶ್ರಯದಲ್ಲಿ ತಾಲೂಕಿನ ಕೃಷಿ ಸಖಿಯರಿಗೆ ಎರಡು ದಿನಗಳ ಕಾಲ ಜೇನು ಸಾಕಣಿಕೆ ತರಬೇತಿ ಕಾರ್ಯಕ್ರಮ ಬಿಸಿರೋಡಿನ ತಾ.ಪಂ.ನ ಎಸ್.ಜಿ.ಸಭಾಂಗಣದಲ್ಲಿ ಸೋಮವಾರ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ತಾ.ಪಂ.ಸಹಾಯಕ ನಿರ್ದೇಶಕ ದಿನೇಶ್ ಅವರು ಮಾತನಾಡಿ, ಇಲಾಖೆಯಲ್ಲಿ ಸಬ್ಸಿಡಿ ರೂಪದಲ್ಲಿ ಜೇನು ಕೃಷಿ ಮಾಡಲು ಅವಕಾಶವಿದ್ದು, ಮಹಿಳೆಯರು ಹೆಚ್ಚು ಹೆಚ್ಚು ಕೃಷಿಯಲ್ಲಿ ತೊಡಗಿಸಕೊಳ್ಳಬೇಕಾಗಿದೆ ಜೇನು ಕೃಷಿ ಜೀವನದ ಒಂದು ಭಾಗವಾಗಿದ್ದು, ಜೇನು ಕೃಷಿಯನ್ನು ಉತ್ತಮ ಆದಾಯದ ವೃತ್ತಿಯಾಗಿ ಸ್ವೀಕರಿಸಬಹುದು. ವ್ಯಕ್ತಿಯ ಯಶಸ್ವಿಗೆ ಶ್ರಮ,ಸ್ಥಿರತೆ ಅಗತ್ಯವಿದೆ. ಯಾವುದೇ ಉದ್ಯೋಗ ,ಉದ್ಯಮದಲ್ಲಿ ಸಾಧಿಸಲು ಆತ್ಮವಿಶ್ವಾಸ ಅತೀ ಮುಖ್ಯ, ಜೀವನದ ಒಂದು ಭಾಗವಾಗಿ ಹೊಂದಿಸಿಕೊಂಡು ಸಮಯ ನೀಡಬೇಕು ಎಂದು ಅವರು ತಿಳಿಸಿದರು.
ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಪ್ರದೀಪ್ ಡಿ.ಸೋಜ ಮಾತನಾಡಿ, ಕೃಷಿ ಇಲಾಖೆಯ ಮೂಲಕ ಜೇನು ಕೃಷಿಯನ್ನು ಯಾವ ರೀತಿ ಮಾಡಬಹುದು ಎಂಬ ವಿಚಾರಗಳನ್ನು ತಿಳಿಸಿದರು.ಬಳಿಕ ಜೇನುನೊಣಗಳ ಮತ್ತು ಸಾಕಣೆ ಬಗ್ಗೆ ಮಾಹಿತಿ ನೀಡಿದರು.
ಸಹಾಯಕ ತೋಟಗಾರಿಕಾ ನಿರ್ದೇಶಕ ಮಂಜುನಾಥ್ , ಸಂಪನ್ಮೂಲ ವ್ಯಕ್ತಿ ಗಳಾದ ಲಕ್ಷಣ್ ಗೌಡ ಮತ್ತು ರಾಧಕೃಷ್ಣ ಹಾಗೂ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು. ತಾಲೂಕು ವ್ಯವಸ್ಥಾಪಕಿ ಸುಧಾ ಸ್ವಾಗತಿಸಿ ವಂದಿಸಿದರು. ವಲಯ ಮೇಲ್ವಿಚಾರಕಿ ದೀಕ್ಷಿತ ನಿರೂಪಿಸಿದರು.