ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ.ರೋಡಿನ ಸೇತುವೆಯಲ್ಲಿ ಮಂಗಳವಾರ ಸಂಜೆ ನಡೆದ ಸಣ್ಣ ಅಪಘಾತವೊಂದು ದೊಡ್ಡ ಟ್ರಾಫಿಕ್ ಜಾಮ್ ಗೆ ಕಾರಣವಾಯಿತು. ಸುಮಾರು ಅಂದಾಜು ಎರಡು ತಾಸುಗಳ ಕಾಲ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಬಳಿಕ ಟ್ರಾಫಿಕ್ ಎಸ್.ಐ. ಸುತೇಶ್ ಮತ್ತು ಸಿಬಂದಿ ವಾಹನದಟ್ಟಣೆ ಕ್ಲಿಯರ್ ಮಾಡಿದರು.
ವಾಹನಗಳೆರಡು ಹಿಂದಿನಿಂದ ಡಿಕ್ಕಿ ಹೊಡೆದು ನಿಂತಾಗ ಮತ್ತೆರಡು ವಾಹನಗಳು ಡಿಕ್ಕಿ ಹೊಡೆದುಕೊಂಡವು. ಹೀಗಾಗಿ ನಾಲ್ಕು ವಾಹನಗಳಿಗೆ ಹಾನಿಯಾದದ್ದು ಒಂದೆಡೆಯಾದರೆ, ಇದರಿಂದಾಗಿ ಒಂದರ ಹಿಂದೆ ಒಂದರಂತೆ ವಾಹನಗಳು ಸಾಲುಗಟ್ಟಿ ನಿಂತವು. ಜೊತೆಗೆ ಸಾಗರ್ ಆಡಿಟೋರಿಯಂ ಮುಂಭಾಗ ಲಾರಿಯೊಂದು ಕೆಟ್ಟು ನಿಂತಿತು. ಈ ಸಂದರ್ಭ ವಾಹನಗಳು ಶಿಸ್ತಿನಿಂದ ಸಾಗುವುದನ್ನು ಬಿಟ್ಟು, ರಾಂಗ್ ಸೈಡ್ ನಿಂದ ನಾಮುಂದು, ತಾಮುಂದು ಎಂಬಂತೆ ಸೇರಿಕೊಂಡು ಮತ್ತಷ್ಟು ಗೊಂದಲಕ್ಕೆ ಕಾರಣವಾಯಿತು. ಈ ಮಧ್ಯೆ ಅಪಘಾತಗೊಂಡ ವಾಹನಗಳನ್ನು ಬದಿಗೆ ಸರಿಸಿ, ಸುಗಮ ವಾಹನ ಸಂಚಾರಕ್ಕೆ ತರಬೇಕಾದರೆ, ಬಂಟ್ವಾಳ ಟ್ರಾಫಿಕ್ ಪೊಲೀಸರು ಹರಸಾಹಸಪಡಬೇಕಾಯಿತು. ಸುಮಾರು ಎರಡು ತಾಸುಗಳ ಕಾಲ ಟ್ರಾಫಿಕ್ ಜಾಮ್ ಆದ ಬಳಿಕ ನಿಧಾನವಾಗಿ ಮುಂದೆ ಸಾಗಿದವು.