ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಶ್ರಾವನ ಮಾಸದ ತಾಳಮದ್ದಳೆ ಸೇವೆ ಆಗಸ್ಟ್ 17ರಂದು ಮೊದಲ್ಗೊಂಡು ಸೆ.15ರಂದು ಕೊನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು.
ಕಲಾಪೋಷಕ, ಸಂಘಟಕ ಹಾಗೂ ಕಲಾವಿದ ವಾಸುದೇವ ರಾವ್ ಸುರತ್ಕಲ್ ಮತ್ತು ಸ್ನೇಹಶೀಲ ಭಾಗವತ ಸೀತಾರಾಮ ಸಾಲೆತ್ತೂರು ಅವರನ್ನು ಸನ್ಮಾನಿಸಲಾಯಿತು. ಮಲ್ಲಿಕಾ ವಿ.ಶೆಟ್ಟಿ ಸನ್ಮಾನಿತರನ್ನು ಅಭಿನಂದಿಸಿದರು. ದೇವಳದ ಮೊಕ್ತೇಸರ ಭಾಮಿ ನಾಗೇಂದ್ರ ಶೆಣೈ ಉಪಸ್ಥಿತರಿದ್ದರು. ಈ ಸಂದರ್ಭ ಸನ್ಮಾನಿತರು ಅನಿಸಿಕೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್ ಶೆಣೈ ಮಾತನಾಡಿ, ಶ್ರಾವಣ ಮಾಸದ ಮಹತ್ವದ ಕುರಿತು ವಿವರಿಸಿ, ಯಕ್ಷಗಾನ ಸೇವೆ ಯಶಸ್ಸಿಗೆ ಕಾರಣಕರ್ತರಾದವರಿಗೆ ಕೃತಜ್ಞತೆ ಸಲ್ಲಿಸಿದರು. ನಾಗೇಂದ್ರ ಪೈ ಸ್ವಾಗತಿಸಿದರು. ಸಮಿತಿ ಕಾರ್ಯದರ್ಶಿ ಆರ್ಲ ಯೋಗೀಶ ಪ್ರಭು ವರದಿ ವಾಚಿಸಿದರು. ವಸಂತ ಪ್ರಭು ವಂದಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ, ಹವ್ಯಾಸಿ ಅರ್ಥಧಾರಿ ಸಂಕಪ್ಪ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭ ಹಿರಿಯ ಕಲಾವಿದರಿಂದ ಕೃಷ್ಣಾರ್ಜುನ ಕಾಳಗ ಯಕ್ಷಗಾನ ತಾಳಮದ್ದಳೆ ಪ್ರಸ್ತುತಗೊಂಡಿತು.