ಮಂಗಳೂರು ಹವ್ಯಕ ಮಂಡಲ, ದ.ಕ.-ಕಾಸರಗೋಡು ಹವ್ಯಕ ಮಹಾಜನ ಸಭಾ, ಮಂಗಳೂರು ಹವ್ಯಕ ಸಭಾ, ಶ್ರೀ ಭಾರತೀ ಸೌಹಾರ್ದ ಸಹಕಾರಿ ನಿಯಮಿತ ಮತ್ತು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಸೇವಾ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಶಂಕರಶ್ರೀ ಸಭಾಭವನದಲ್ಲಿ ಶತರುದ್ರಾಭಿಷೇಕ, ಮಾತೆಯರಿಂದ ಕುಂಕುಮಾರ್ಚನೆ ಮತ್ತು ದ.ಕ.ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಶ್ರೀಕೃಷ್ಣ ಎನ್. ನೀರಮೂಲೆ ಮತ್ತು ಕವಿತಾ ದಂಪತಿಯನ್ನು ಗೌರವಿಸಿ, ಸನ್ಮಾನಿಸಲಾಯಿತು.
ಮಂಗಳೂರು ಹವ್ಯಕ ಮಂಡಲ ಅಧ್ಯಕ್ಷ ಗಣೇಶಮೋಹನ ಕಾಶಿಮಠ ಅಧ್ಯಕ್ಷತೆ ವಹಿಸಿ, ಮಾತನಾಡಿ, ಕಿಟೆಲ್ ಪ್ರೌಢ ಶಾಲೆಯ ಸರ್ವತೋಮುಖ ಬೆಳವಣಿಗೆಗೆ ಕಾರಣೀಭೂತರಾಗಿರುವ ಶ್ರೀಕೃಷ್ಣ ನೀರಮೂಲೆ ಅವರು ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಕರಿಸಿ, ಬಾಳು ಬೆಳಗಿದವರು. ಶೈಕ್ಷಣಿಕ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ. ತಡವಾಗಿಯಾದರೂ ಅವರ ಸಾಧನೆ, ಶ್ರಮವನ್ನು ಗುರುತಿಸಲಾಗಿದೆ. ಅರ್ಹರಿಗೆ ಗೌರವ ನೀಡಿ ಪ್ರಶಸ್ತಿಯ ಮೌಲ್ಯ ಹೆಚ್ಚಾಗಿದೆ. ವಿವಿಧ ಕ್ಷೇತ್ರಗಳಲ್ಲಿ ದುಡಿದ ಅವರು ಶ್ರೀ ಭಾರತೀ ಸಮೂಹ ಸಂಸ್ಥೆಯ ಬೆಳವಣಿಗೆಯಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆ. ರಕ್ತದಾನ ಶಿಬಿರಗಳನ್ನು ಆಯೋಜಿಸಿ, ಹಲವರಿಗೆ ರಕ್ತ ಒದಗಿಸಿ, ಹಲವರ ಪ್ರಾಣ ಉಳಿಸಿದ್ದಾರೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ದ.ಕ.-ಕಾಸರಗೋಡು ಹವ್ಯಕ ಮಹಾಜನ ಸಭಾ ಅಧ್ಯಕ್ಷ ಕೃಷ್ಣ ಭಟ್ ನಿಡುಗಳ, ಶ್ರೀ ಭಾರತೀ ಸೌಹಾರ್ದ ಸಹಕಾರಿ ನಿಯಮಿತ ಅಧ್ಯಕ್ಷ ಜಿ.ಕೆ.ಭಟ್ ಕೊಣಾಜೆ, ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆ ಕಾರ್ಯಾಲಯ ಕಾರ್ಯದರ್ಶಿ ಎಂ.ಟಿ.ಭಟ್, ಮಾತೃತ್ವಮ್ ಅಧ್ಯಕ್ಷೆ ಸುಮಾ ರಮೇಶ್ ಭಾಗವಹಿಸಿದ್ದರು.
ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಕೋಶಾಧಿಕಾರಿ ಉದಯಶಂಕರ್ ನೀರ್ಪಾಜೆ ಅಭಿನಂದನ ಭಾಷಣ ಮಾಡಿದರು. ನಿವೃತ್ತ ಪ್ರಾಂಶುಪಾಲ ಜಿ.ಕೆ.ಭಟ್ ಸೇರಾಜೆ ಅವರು ಮಾತನಾಡಿ, ಶ್ರೀಕೃಷ್ಣ ನೀರಮೂಲೆ ಅವರು ಸಮಾಜದ ದೊಡ್ಡ ಆಸ್ತಿ. ಅವರಿಂದ ಸಮಾಜಕ್ಕೆ ಇನ್ನೂ ಅನೇಕ ಸೇವೆ, ಕೊಡುಗೆ ಲಭ್ಯವಾಗಲಿದೆ. ಅವರಿಗೆ ರಾಷ್ಟ್ರ ಪ್ರಶಸ್ತಿ ಲಭಿಸಲಿ ಎಂದು ಆಶಿಸಿದರು. ಪ್ರಶಸ್ತಿ ಪುರಸ್ಕೃತ ಶಿಕ್ಷಕ ಶ್ರೀಕೃಷ್ಣ ಎನ್. ನೀರಮೂಲೆ ಅವರು ಸಮ್ಮಾನಕ್ಕೆ ಉತ್ತರಿಸಿ, ಕೃತಜ್ಞತೆ ವ್ಯಕ್ತಪಡಿಸಿದರು.
ಉತ್ತರ ವಲಯ ವೈದಿಕ ಪ್ರಧಾನ ಬಾಲಕೃಷ್ಣ ಭಟ್ ಬಾಯಾಡಿ, ಕಿಟೆಲ್ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಶುಭಾಶಂಸನೆಗೈದರು. ಹವ್ಯಕ ಸಭಾ ಕಾರ್ಯದರ್ಶಿ ಮೀರಾ ಭಟ್ ಅವರು ಶ್ರೀಕೃಷ್ಣ ನೀರಮೂಲೆ ಅವರ ಬಗ್ಗೆ ಸ್ವರಚಿತ ಕವನ ವಾಚಿಸಿದರು.ವೇಣುಗೋಪಾಲ ಭಟ್ ಮಾಂಬಾಡಿ ಸಮ್ಮಾನ ಪತ್ರ ವಾಚಿಸಿದರು.ಮಂಗಳೂರು ಹವ್ಯಕ ಸಭಾ ಅಧ್ಯಕ್ಷ ಡಾ.ಬಿ.ರಾಜೇಂದ್ರಪ್ರಸಾದ್ ಸ್ವಾಗತಿಸಿದರು. ಮಧ್ಯ ವಲಯಾಧ್ಯಕ್ಷ-ದರ್ಶನ್ ಸ್ವಿಚ್ ಗೇರ್ ಮಾಲಕ ಬಾಲಸುಬ್ರಹ್ಮಣ್ಯ ಭಟ್ ಕಬೆಕ್ಕೋಡು ಕಾರ್ಯಕ್ರಮ ನಿರೂಪಿಸಿದರು. ಮಂಗಳೂರು ಹವ್ಯಕ ಸಭಾ ಮಾಜಿ ಅಧ್ಯಕ್ಷ ಸುಬ್ರಹ್ಮಣಂ ಕಾಶಿಮಠ ವಂದಿಸಿದರು.