ಬಂಟ್ವಾಳ: ಬಂಟ್ವಾಳ ಕನ್ನಡ ಭವನದಲ್ಲಿ ದಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕು ಘಟಕ ಮತ್ತು ಅಭಿರುಚಿ ಜೋಡುಮಾರ್ಗ ಸಹಯೋಗದೊಂದಿಗೆ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರ ಸಂಸ್ಮರಣಾ ಕಾರ್ಯಕ್ರಮ ಹಾಗೂ ಕಾವ್ಯವಾಚನ, ವ್ಯಾಖ್ಯಾನ ನಡೆಯಿತು.
ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ ಜ್ಯೋತಿ ಬೆಳಗಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಸಂಶೋಧನ ಕೇಂದ್ರದ ಅಧ್ಯಕ್ಷ ಡಾ.ತುಕಾರಾಮ ಪೂಜಾರಿ ಸಂಸ್ಮರಣಾ ಭಾಷಣ ಮಾಡಿ, ಏರ್ಯರು ಸಾಹಿತ್ಯ, ಸಹಕಾರ,ಶಿಕ್ಷಣ ಹೀಗೆ ಹಲವು ರಂಗಗಳಲ್ಲಿ ಕ್ರಿಯಾಶೀಲರಾಗಿದ್ದ ಹಿರಿಯರು.ಆಯಾ ಕ್ಷೇತ್ರಗಳಲ್ಲಿ ತಮ್ಮ ಸಂಪರ್ಕಕ್ಕೆ ಬಂದ ಕಿರಿಯರನ್ನು, ಯುವಕರನ್ನು ಬೆನ್ನುತಟ್ಟಿ ಮುನ್ನಡೆಸಿದ ಬಗೆ ಅನನ್ಯವಾದುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬಳಿಕ ಗಮಕಿ ಮಂಜುಳಾ ಸುಬ್ರಹ್ಮಣ್ಯ ಹಾಗೂ ವಾಮದಪದವು ಸರ್ಕಾರಿ ಪ್ರ.ದ. ಕಾಲೇಜಿನ ಉಪನ್ಯಾಸಕಿ ರೇಶ್ಮಾ ಭಟ್ ಅಜಕ್ಕಳ ಅವರಿಂದ ಪಂಪ ಭಾರತದ ದ್ರೋಣ-ದ್ರುಪದ ಭಾಗದ ಕಾವ್ಯವಾಚನ -ವ್ಯಾಖ್ಯಾನ ನಡೆಯಿತು..ಕ.ಸಾ.ಪ. ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ ವಿಶ್ವನಾಥ ಬಂಟ್ವಾಳ, ಅಭಿರುಚಿ ಅಧ್ಯಕ್ಷ ಎಚ್.ಸುಂದರ ರಾವ್ ಉಪಸ್ಥಿತರಿದ್ದರು. ಕ.ಸಾ.ಪ.ತಾಲೂಕು ಘಟಕದ ಗೌ.ಕಾರ್ಯದರ್ಶಿ ವಿ.ಸು.ಭಟ್ ಸ್ವಾಗತಿಸಿದರು. ಅಭಿರುಚಿ’ ಜೋಡುಮಾರ್ಗ ಕಾರ್ಯದರ್ಶಿ ಮಹಾಬಲೇಶ್ವರ ಹೆಬ್ಬಾರ್ ವಂದಿಸಿದರು. ಬಿ.ಮೂಡ ಸರ್ಕಾರಿ ಪ.ಪೂ.ಕಾಲೇಜಿನ ವಿದ್ಯಾರ್ಥಿನಿ ಯರು ನಾಡಗೀತೆ ಹಾಡಿದರು