ಬಂಟ್ವಾಳ: ಬಂಟರ ಸಂಘ ಬಂಟವಾಳ ಮತ್ತು ಮುಂಬೈಯ ಆಲ್ ಕಾರ್ಗೋ ಲಾಜೆಸ್ಟಿಕ್ಸ್ ಸಂಸ್ಥೆ ಅಧ್ಯಕ್ಷ ಶಶಿಕರಣ್ ಶೆಟ್ಟಿ ಸಹಯೋಗದಲ್ಲಿ ಶಿಕ್ಷಣ ಮತ್ತು ಸಾಮಾಜಿಕ ಕಲ್ಯಾಣ ಕಾರ್ಯಕ್ರಮದಡಿ ಬಂಟ್ವಾಳ ತಾಲೂಕಿನ ಸರ್ವ ಸಮಾಜದ ಸುಮಾರು 1,750 ವಿದ್ಯಾರ್ಥಿಗಳಿಗೆ 52 ಲಕ್ಷ ರೂ. ವಿದ್ಯಾರ್ಥಿ ವೇತನವನ್ನು ಭಾನುವಾರ ಬ್ರಹ್ಮರಕೂಟ್ಲುವಿನಲ್ಲಿರುವ ಬಂಟ್ವಾಳ ಬಂಟರ ಭವನದಲ್ಲಿ ವಿತರಿಸಲಾಯಿತು.
ಕಾರ್ಯಕ್ರಮವನ್ನು ಮುಂಬೈ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭ ಮುಂಬೈ ಬಂಟರ ಸಂಘ ನಡೆಸುತ್ತಿರುವ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ವಿವರಿಸಿದ ಅವರು, ನೆರವು ಅಗತ್ಯವುಳ್ಳ ಕುಟುಂಬವನ್ನು ದತ್ತು ಪಡೆಯುವುದು, ವಿದ್ಯಾರ್ಥಿಗಳಿಗೆ ಬಡ್ಡಿರಹಿತ ಸಾಲ ಮೂಲಕ ನೇರವಾಗಿ ವಿದ್ಯಾಸಂಸ್ಥೆಗಳಿಗೇ ಫೀಸ್ ಪಾವತಿ ಮಾಡುವುದೇ ಮೊದಲಾದ ಶಿಕ್ಷಣದ ಕುರಿತು ಕಾಳಜಿ ಮೂಲಕ ಬಂಟರ ಸಂಘ ಸಮಾಜಕ್ಕೆ ನೆರವಾಗುತ್ತಿದೆ ಎಂದವರು ಹೇಳಿದರು.
ದೇಶ ಕಟ್ಟಲು ಪೂರಕ: ಯು.ಟಿ.ಖಾದರ್
ಈ ಸಂದರ್ಭ ವಿಧಾನಸಭಾಧ್ಯಕ್ಷ ಹಾಗೂ ಕ್ಷೇತ್ರದ ಶಾಸಕ ಯು.ಟಿ.ಖಾದರ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಬಂಟರ ಸಂಘದ ಪೂರ್ವಾಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ಸನ್ಮಾನಕ್ಕೆ ಉತ್ತರಿಸಿದ ಖಾದರ್, ವಿದ್ಯಾರ್ಥಿವೇತನ ನೀಡುವ ಮೂಲಕ ಬಂಟರ ಸಂಘ ದೇಶ ಕಟ್ಟಲು ಪೂರಕವಾದ ಕೆಲಸ ಮಾಡುತ್ತಿದೆ, ದೇಶದಲ್ಲೇ ಉತ್ತಮ ಅವಕಾಶವನ್ನು ಪಡೆದುಕೊಂಡು ಭಾರತವನ್ನು ವಿಶ್ವವೇ ಗುರುತಿಸುವಂತೆ ಮಾಡುವ ಕೆಲಸ ಯುವಕರ ಮೇಲಿದೆ. ಯುವಜನತೆ ರಾಜಕೀಯ ಕ್ಷೇತ್ರಕ್ಕೂ ಪ್ರವೇಶಿಸುವುದರ ಮೂಲಕ ಹೊಸ ಸಮಾಜ ನಿರ್ಮಾಣಕ್ಕೆ ಪೂರಕವಾಗಿ ಕೆಲಸ ಮಾಡಬೇಕು ಎಂದು ಶುಭ ಹಾರೈಸಿದರು. ಬಂಟ್ವಾಳ ಬಂಟರ ಸಂಘದಿಂದ ಖಾದರ್ ಅವರಿಗೆ ಬೇಡಿಕೆಗಳುಳ್ಳ ಮನವಿ ಸಲ್ಲಿಸಲಾಯಿತು. ಇದನ್ನು ಪೂರೈಸುವುದಾಗಿ ಅವರು ಭರವಸೆ ನೀಡಿದರು.
ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಅವರನ್ನು ಗೌರವಿಸಲಾಯಿತು. ಬಂಟವಾಳ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ ಕಾರ್ಯಕ್ರಮದ ಉದ್ದೇಶಗಳನ್ನು ವಿವರಿಸಿದರು.
ಕಾರ್ಗೋಲಾಜೆಸ್ಟಿಕ್ಸ್ ಸಂಸ್ಥೆಯ ಹಿರಿಯ ಪ್ರಧಾನ ವ್ಯವಸ್ಥಾಪಕರಾದ ಡಾ.ನೀಲ್ ರತನ್ ಶೆಂಡೆ ಅವರು ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿಗಳು ಮುಂದೆ ಉನ್ನತ ಉದ್ಯೋಗ ಪಡೆದ ಬಳಿಕ ಇತರರಿಗೂ ನೆರವಾಗಬೇಕು ಎಂದು ಸಲಹೆ ನೀಡಿದರು.
ಸಂಘದ ಕೋಶಾಧಿಕಾರಿ ಲೋಕೇಶ್ ಶೆಟ್ಟಿ, ಜೊತೆ ಕೋಶಾಧಿಕಾರಿ ಪ್ರತಿಭಾ ಎ.ರೈ.,ಜತೆ ಕಾರ್ಯದರ್ಶಿ ರಂಜನ್ ಕುಮಾರ್ ಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷೆ ರಮಾ ಎಸ್.ಭಂಡಾರಿ, ಯುವ ವಿಭಾಗದ ಅಧ್ಯಕ್ಷ ನಿಶಾನ್ ಆಳ್ವ, ಕಾರ್ಯಕ್ರಮದ ಸಂಚಾಲಕ ಎಚ್. ಸಂಕಪ್ಪ ಶೆಟ್ಟಿ ಹಾಗೂ ವಿವಿಧ ವಲಯಗಳ ಅಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಂಟವಾಳ ಬಂಟರ ಸಂಘದ ಉಪಾಧ್ಯಕ್ಷ ಡಾ.ಪ್ರಶಾಂತ್ ಮಾರ್ಲ ಸ್ವಾಗತಿಸಿದರು. ಕಾರ್ಯದರ್ಶಿ ಜಗನ್ನಾಥ ಚೌಟ ಬದಿಗುಡ್ಡೆ ವಂದಿಸಿದರು. ಬಾಲಕೃಷ್ಣ ಶೆಟ್ಟಿ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.