ಬಂಟ್ವಾಳ ತಾಲೂಕು ಕುಲಾಲ ಸಮುದಾಯ ಭವನ ಪೊಸಳ್ಳಿ ಯಲ್ಲಿ ನಡೆದ ಬಂಟ್ವಾಳ ತಾಲೂಕು ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕೋತ್ಸವವನ್ನು ಮೆಸ್ಕಾಂ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಮಂಜಪ್ಪ ಮೂಲ್ಯ ಉದ್ಘಾಟಿಸಿದರು.
ಕೆಲಸದ ಜಂಜಾಟದಲ್ಲಿದ್ದ ನಿವೃತ್ತರಿಗೆ ಸಮಾಜ ಸೇವೆ ಮಾಡಲು ಇದೊಂದು ಒಳ್ಳೆಯ ಸಂದರ್ಭ ಮಾತ್ರವಲ್ಲ ಹಿರಿಯರ ಸಮಸ್ಯೆಗಳಿಗೆ ಪರಿಹಾರದೊಂದಿಗೆ ಯುವಕರಿಗೆ ಮಾರ್ಗದರ್ಶನ ಮಾಡಲು ಸಮಾಜದಲ್ಲಿ ಇಂಥ ಸಂಘಟನೆಗಳು ಬೇಕು ಎಂದು ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ಟಿ ಶೇಷಪ್ಪ ಮಾಸ್ಟರ್ ಮಾತನಾಡಿ ನಾವು ವೃದ್ಧರು ಎಂಬ ಹಿಂಜರಿಕೆ ಬಿಟ್ಟು ನಾವು ಹಿರಿಯರು ಎಂಬ ವಿಶಾಲ ಮನಸ್ಸಿನಿಂದ ಮನೆಯಿಂದ ಹಿಡಿದು ಎಲ್ಲಾ ವಯೋಮಾನದವರೊಂದಿಗೆ ಹಂಚಿಕೊಂಡು ಕಾರ್ಯನಿರ್ವಹಿಸಿದಾಗ ಇನ್ನಷ್ಟು ಮಾನಸಿಕ ನೆಮ್ಮದಿ ದೊರೆತು ಅರೋಗ್ಯಪೂರ್ಣವಾಗಿ ಬದುಕಲು ಸಹಾಯವಾಗುವುದು. ಅದಕ್ಕಾಗಿ ಸಂಘವನ್ನು ಬಲಪಡಿಸುವುದರೊಂದಿಗೆ ಸ್ವಂತ ನಿವೇಶನ ಸಭಾಭವನದ ಕನಸು ನಿಮ್ಮೆಲ್ಲರ ಸಹಕಾರದಿಂದ ಆಗಬೇಕಾಗಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಯುವವೇದಿಕೆ ಹಾಗೂ ಮಹಿಳಾ ಸಂಘಟನೆಗಳ ಒಕ್ಕೂಟ (ರಿ ) ರಾಜ್ಯಾಧ್ಯಕ್ಷರಾದ ಗಂಗಾಧರ್ ಬಂಜನ್ ಕುಳಾಯಿ, ಜಿಲ್ಲಾಧ್ಯಕ್ಷರಾದ ಸುಕುಮಾರ್ ಬಂಟ್ವಾಳ್, ಕುಲಾಲ ಸುಧಾರಕ ಸಂಘ ಬಂಟ್ವಾಳ ಅಧ್ಯಕ್ಷರಾದ ರಾಧಾಕೃಷ್ಣ ಬಂಟ್ವಾಳ್ ಭಾಗವಹಿಸಿದ್ದರು.
ವೇದಿಕೆಯಲ್ಲಿ ಉಪಾಧ್ಯಕ್ಷರಾದ ಶೀನ ಮೂಲ್ಯ ಅಲ್ಲಿಪ್ಪಾದೆ ಉಪಸ್ಥಿತರಿದ್ದರು. ಈ ಸಂದರ್ಭ ಮಂಜಪ್ಪ ಮೂಲ್ಯ ಹಾಗೂ 75 ವರ್ಷ ದಾಟಿದ ಹಿರಿಯರಾದ ಸೀತಾರಾಮ ಗೋಳಿನೆಲ, ಜಾರಪ್ಪ ಮೂಲ್ಯ ಬಂಡಾರಿಬೆಟ್ಟು ಅವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರಿಚಯವನ್ನು ಸದಸ್ಯರಾದ ವಿಶ್ವನಾಥ ಸಾಲಿಯಾನ್, ರತ್ನಾವತಿ, ರೋಹಿಣಿ ಮಾಡಿದರು. ಶಾಂಭವಿ ಸೋಮಯ್ಯ ಪ್ರಾರ್ಥಿಸಿದರು. ಸಂಘಟನಾ ಕಾರ್ಯದರ್ಶಿ ಕಿಟ್ಟು ಮೂಲ್ಯ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಲಕ್ಷ್ಮಣ ಮೂಲ್ಯ ವರದಿ ವರ್ಷದಲ್ಲಿ ನಿಧನರಾದ ಸದಸ್ಯರ ಮಾಹಿತಿ ನೀಡಿದರು. ಕಾರ್ಯದರ್ಶಿ ಪದ್ಮನಾಭ ಎಂ ವರದಿ ಮಂಡಿಸಿ ಕುಮ್ಕಿ ಜಮೀನು ಸ್ವಾಧೀನ ಮತ್ತು ಕಾನೂನು ಮಾಹಿತಿ ನೀಡಿದರು. ಕೋಶಾಧಿಕಾರಿ ಸೋಮಯ್ಯ ಮೂಲ್ಯ ಹನೈನಡೆ ಸಂಘದ ಲೆಕ್ಕಪತ್ರ ಮಂಡಿಸಿ ಹಿರಿಯರಿಗೆ ಕಡಿಮೆ ಖರ್ಚಿನಲ್ಲಿ ಪ್ರವಾಸ ಹಾಗೂ ತೀರ್ಥಯಾತ್ರೆ ಬಗ್ಗೆ ಮಾಹಿತಿ ನೀಡಿದರು.
ಉಪಾಧ್ಯಕ್ಷರಾದ ಸೋಮಪ್ಪ ಮೂಲ್ಯ ವಂದಿಸಿದರು. ಭಾರತಿ ಶೇಷಪ್ಪ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕಾರಿ ಸಮಿತಿ ಸದಸ್ಯರಾದ ಓಬಯ್ಯ ಮೂಲ್ಯ, ನೀಲಪ್ಪ ಸಾಲಿಯಾನ್, ವಿಠ್ಠಲ್ ಮೂಲ್ಯ ಜಕ್ರಿಬೆಟ್ಟು ಕೃಷ್ಣಶ್ಯಾಮ್ ಹಾಗೂ ಕುಲಾಲ ಯುವವೇದಿಕೆಯ ಯುವಕರು ನಿತೀಶ್ ಪಲ್ಲಿಕಂಡ ನೇತೃತ್ವದಲ್ಲಿ ವ್ಯವಸ್ಥೆಯಲ್ಲಿ ಸಹಕರಿಸಿದ್ದರು.