ವಿಟ್ಲ

ಒಡಿಯೂರಿನಲ್ಲಿ ಶ್ರೀಗಳ ಜನ್ಮದಿನೋತ್ಸವ, ಗ್ರಾಮೋತ್ಸವ, ಸೇವಾ ಸಂಭ್ರಮ, ಗುರುವಂದನೆ

ಮಂಗಳವಾರ ಒಡಿಯೂರು ಶ್ರೀ ಕ್ಷೇತ್ರದ ರಾಜಾಂಗಣದಲ್ಲಿ  ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಜನ್ಮದಿನೋತ್ಸವ ಸಮಿತಿ, ವತಿಯಿಂದ ಶ್ರೀಗಳ ಜನ್ಮದಿನೋತ್ಸವ ಹಿನ್ನೆಲೆ ಗ್ರಾಮೋತ್ಸವ, ಗುರುವಂದನಾ, ಸೇವಾ ಸಂಭ್ರಮ ಕಾರ್ಯಕ್ರಮಗಳ ಉದ್ಘಾಟನೆ ಬಳಿಕ ಧರ್ಮಸಭೆ ನಡೆಯಿತು.

ಜಾಹೀರಾತು

ಈ ಸಂದರ್ಭ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಅನುಗ್ರಹ ಸಂದೇಶ ನೀಡಿ, ಬಹಳಷ್ಟು ಸಮಸ್ಯೆಗಳ ಪರಿಹಾರವನ್ನು ಹೊರಗೆ ಹುಡುಕುತ್ತೇವೆ. ಆದರೆ ನಮ್ಮೊಳಗೆ ಇಣುಕಿದರೆ ಹಲವು ವಿಚಾರಗಳಿಗೆ ಪರಿಹಾರ ದೊರಕುತ್ತದೆ. ತನ್ನೊಳಗೆ ತನ್ನನ್ನು ಹುಡುಕಿಕೊಳ್ಳುವ ಬದುಕೇ ಆಧ್ಯಾತ್ಮಿಕ ಬದುಕು ಎಂದು  ನುಡಿದರು.

ಜಾಹೀರಾತು

ಜಾಹೀರಾತು

ನಾವು ಒಳಗೆ ಇಣುಕುವ ಕೆಲಸ ಮಾಡಬೇಕು. ನಮ್ಮಲ್ಲಿರುವ ಕೆಟ್ಟದನ್ನು ಗುರುತಿಸುವ ಕಾರ್ಯ ಆಗಬೇಕು. ಸಮಾಜದ ಋಣ ತೀರಿಸುವ ಜವಾಬ್ದಾರಿ ನಮ್ಮ ಮೇಲಿದೆ. ನಾವು ಹಿರಿಯರನ್ನು ಮರೆತರೆ ಎಲ್ಲವನ್ನೂ ಮರೆತಂತೆ. ತುಳುವಿನಲ್ಲಿ ಪರಬೆರು ಎನ್ನುತ್ತಾರೆ. ‘ಪರ ಬೇರು’ ಎಂದೂ ಆಗುತ್ತದೆ. ಹಿರಿಯರನ್ನು ಅಂದರೆ, ಹಳೆ ಬೇರನ್ನು ಮರೆಯಬೇಡಿ. ಸನಾತನ ವಿಚಾರವನ್ನು ಮರೆಯಬೇಡಿ. ಆದರ್ಶವಾದ ರಾಷ್ಟ್ರದ ನಿರ್ಮಾಣ ಅಗತ್ಯವಾಗಿದ್ದು, ಅದಕ್ಕೋಸ್ಕರ ಇಂದಿನ ಕಾರ್ಯಕ್ರಮ ಆಯೋಜಿಸಲಾಗಿದೆ. ನಮ್ಮಲ್ಲಿ ಕಾಮ, ಕ್ರೋಧ, ಲೋಭವನ್ನು ಹಿಡಿದು ಓಡಿಸಿದರೆ, ಆತ್ಮತೃಪ್ತಿ ಸಾಧ್ಯ. ಧನಕ್ಕೆ ಮೌಲ್ಯ ದಾನ ಮಾಡಿದಾಗ ಲಭಿಸುತ್ತದೆ. ಲಾಭದಲ್ಲಿ ಆರೋಗ್ಯ ಲಾಭ ವಿಶೇಷ. ಅಹಂಕಾರ ಮತ್ತು ಮಮಕಾರಗಳನ್ನು ನಾವು ತ್ಯಜಿಸಬೇಕು ಎಂದು ಶ್ರೀಗಳು ಸಂದೇಶ ನೀಡಿದರು. ಹುಟ್ಟುಹಬ್ಬ ಆಚರಣೆ ಮಾಡುವವರು ಸಸಿ ನೆಡುವ ಮೂಲಕ ಅಥವಾ ದೇವತಾ ಕಾರ್ಯಗಳನ್ನು ನೆರವೇರಿಸುವ ಮೂಲಕ ಸಮಾಜಕ್ಕೆ ಸಂದೇಶಗಳನ್ನು ನೀಡುವುದರೊಂದಿಗೆ ಆಚರಿಸಬಹುದು ಎಂದರು.

ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಮಾತನಾಡಿ, ಮನುಷ್ಯ ತನ್ನನ್ನು ತಾನು ವಿಮರ್ಶಿಸಿಕೊಂಡಾಗ ತನ್ನ ತಪ್ಪುಗಳೂ ಗೋಚರಿಸುತ್ತವೆ. ಇಂಥದ್ದನ್ನು ಪಾಲಿಸಿದರೆ, ಪರಿಶುದ್ಧವಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸಬಹುದು ಎಂದರು. ಸಾಧ್ವಿ ಶ್ರೀ ಮಾತನಾನಂದಮಯೀ ದಿವ್ಯ ಸಾನಿಧ್ಯ ವಹಿಸಿದ್ದರು.

ಜಾಹೀರಾತು

ಸನ್ಮಾನ, ಗೌರವಾರ್ಪಣೆ: ಶ್ರೀ ಸಂಸ್ಥಾನದಿಂದ ವಿಶೇಷ ಗೌರವ ಪುರಸ್ಕಾರವಾದ ದಾನಸಿರಿ ಎಂಬ ಬಿರುದಿನೊಂದಿಗೆ ಮುಂಬೈನ ಹೇರಂಭ ಕೆಮಿಕಲ್ ಇಂಡಸ್ಟ್ರೀಸ್ ಲಿ. ಅಧ್ಯಕ್ಷರು ಮತ್ತು ಆಡಳಿತ ನಿರ್ದೇಶಕರಾದ ಸದಾಶಿವ ಶೆಟ್ಟಿ ಕುಳೂರುಕನ್ಯಾನ ಅವರಿಗೆ ನೀಡಿ ಗೌರವಿಸಲಾಯಿತು. ಆಳ್ವಾಸ್ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಅವರಿಗೆ ವಿದ್ಯಾಸಿರಿ, ಸಂಗೀತ ನಿರ್ದೇಶಕ, ಗಾಯಕ ಶಂಕರ ಶ್ಯಾನುಭೋಗ್ ಅವರಿಗೆ ಗಾನಸಿರಿ, ಹಾಗೂ ಬರೋಡಾ ಶಶಿ ಕ್ಯಾಟರಿಂಗ್ ಸರ್ವೀಸಸ್ ಆಡಳಿತ ನಿರ್ದೇಶಕ ಶಶಿಧರ ಬಿ.ಶೆಟ್ಟಿ ಬರೋಡಾ ಅವರಿಗೆ ಸೇವಾಸಿರಿ ಪುರಸ್ಕಾರ ನೀಡಿ ಗೌರವಿಸಲಾಯಿತು.

ಜಾಹೀರಾತು

ಈ ಸಂದರ್ಭ ಒಡಿಯೂರು ಗ್ರಾಮವಿಕಾಸ ಯೋಜನೆ ಸಹಿತ ದೂರದೂರುಗಳಿಂದ ಆಗಮಿಸಿದ ಭಕ್ತಾಭಿಮಾನಿಗಳು ಶ್ರೀಗಳಿಂದ ಆಶೀರ್ವಾದ ಪಡೆದರು. ಒಡಿಯೂರು ಶ್ರೀಗಳ ಜನ್ಮದಿನೋತ್ಸವ ಸಮಿತಿ ಕಾರ್ಯಾಧ್ಯಕ್ಷ ಕೆ.ಪದ್ಮನಾಭ ಕೊಟ್ಟಾರಿ ಸ್ವಾಗತಿಸಿದರು. ಮಹಾರಾಷ್ಟ್ರ ಸಮಿತಿ ಅಧ್ಯಕ್ಷ ವಾಮಯ್ಯ ಬಿ.ಶೆಟ್ಟಿ, ಮಹಿಳಾ ಸಮಿತಿಯ ಸರ್ವಾಣಿ ಶೆಟ್ಟಿ, ಕಾರ್ಯಾಧ್ಯಕ್ಷ ಲೋಕನಾಥ ಜಿ.ಶೆಟ್ಟಿ ತಾಳಿಪ್ಪಾಡಿಗುತ್ತು, ಒಡಿಯೂರು ಸೌಹಾರ್ದ ಸಹಕಾರಿ ಅಧ್ಯಕ್ಷ ಸುರೇಶ್ ರೈ, ಸಮಿತಿ ಪ್ರಧಾನ ಕೋಶಾಧಿಕಾರಿ ಎ.ಅಶೋಕ್ ಕುಮಾರ್ ಉಪಸ್ಥಿತರಿದ್ದರು. ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ ಹಾಗೂ ಪ್ರಧಾನ ಕಾರ್ಯದರ್ಶಿ ಯಶವಂತ ವಿಟ್ಲ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಾಧ್ಯಕ್ಷ ಕೆ.ಪದ್ಮನಾಭ ಕೊಟ್ಟಾರಿ ಸ್ವಾಗತಿಸಿದರು. ಒಡಿಯೂರು ಸ್ವಸಹಾಯ ಗುಂಪುಗಳಿಗೆ ಲಾಭಾಂಶ ವಿತರಣೆ ಮಾಡಲಾಯಿತು.

ಬೆಳಗ್ಗೆ ಶ್ರೀಗಣಪತಿ ಹವನ, ಮಹಾಪೂಜೆ ಜರಗಿದವು. ಬಳಿಕ  ಅರವಿಂದ ಆಚಾರ್ಯ ಮಾಣಿಲ ಅವರಿಂದ ದಾಸವಾಣಿ, ಬಳಿಕ ಪಾದಪೂಜೆ, ಕರಿಮೆಣಸಿನಲ್ಲಿ ತುಲಾಭಾರ, ಉಯ್ಯಾಲೆ ಸೇವೆ, ಗುರುವಂದನೆ ಕಾರ್ಯಕ್ರಮಗಳು ನಡೆದವು. ಬಳಿಕ ಧರ್ಮಸಭೆಯಲ್ಲಿ ವಿಶೇಷ ಗೌರವ ಪುರಸ್ಕಾರಗಳನ್ನು ಸಾಧಕರಿಗೆ ನೀಡಲಾಯಿತು. ಸಂಜೆ ಕೊಪ್ಪರಿಗೆ ತುಳು ನಾಟಕ, ರಾತ್ರಿ ಶ್ರೀ ಸನ್ನಿಧಿಯಲ್ಲಿ ವಿಶೇಷ ರಂಗಪೂಜೆ, ಬೆಳ್ಳಿ ರಥೋತ್ಸವ, ಮಹಾಪೂಜೆ ನೆರವೇರಿದವು. ಈ ಸಂದರ್ಭ ಜನ್ಮದಿನೋತ್ಸವ ಸಮಿತಿ ಗೌರವ ಮಾರ್ಗದರ್ಶಕರಾದ ಸಾಧ್ವಿ ಶ್ರೀ ಮಾತಾನಂದಮಯೀ, ಗೌರವಾಧ್ಯಕ್ಷ ಸದಾಶಿವ ಶೆಟ್ಟಿ ಕುಳೂರುಕನ್ಯಾನ, ಅಧ್ಯಕ್ಷ ಶಶಿಧರ ಬಿ.ಶೆಟ್ಟಿ ಬರೋಡಾ, ಮಹಾರಾಷ್ಟ್ರ ಸಮಿತಿ ಅಧ್ಯಕ್ಷರಾದ ವಾಮಯ್ಯ ಬಿ.ಶೆಟ್ಟಿ, ಕಾರ್ಯಾಧ್ಯಕ್ಷರಾದ ಕೆ.ಪದ್ಮನಾಭ ಕೊಟ್ಟಾರಿ, ಲೋಕನಾಥ ಜಿ.ಶೆಟ್ಟಿ ತಾಳಿಪ್ಪಾಡಿಗುತ್ತು, ಪ್ರಧಾನ ಕೋಶಾಧಿಕಾರಿಗಳಾದ ಎ.ಸುರೇಶ್ ರೈ, ಎ.ಅಶೋಕ್ ಕುಮಾರ್, ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಯಶವಂತ ವಿಟ್ಲ, ಒಡಿಯೂರು ಶ್ರೀ ಸಂಸ್ಥಾನಂನ ಕಾರ್ಯನಿರ್ವಾಹಕ ಪದ್ಮನಾಭ ಒಡಿಯೂರು, ಕಾರ್ಯದರ್ಶಿ ಸಂತೋಷ್ ಭಂಡಾರಿ, ಮಹಿಳಾ ಸಮಿತಿಯ ಸರ್ವಾಣಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಸಮಾರಂಭದಲ್ಲಿ 67 ಮಂದಿ ಅನಾರೋಗ್ಯ ಪೀಡಿತರಿಗೆ ಚಿಕಿತ್ಸೆಗೆ ನೆರವು, 7 ಮಂದಿಯ ಮನೆ ನಿರ್ಮಾಣಕ್ಕೆ ಸಹಾಯ, 6 ಮಂದಿಗೆ ವಿದ್ಯಾರ್ಥಿವೇತನ ವಿತರಣೆ, 2 ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ನೆರವು, 28 ಮಂದಿಗೆ ಮರಣಸಾಂತ್ವನ ವಿತರಣೆ, 188 ಮಂದಿಗೆ ಉಚಿತ ಕನ್ನಡಕ ವಿತರಣೆ ಮಾಡಲಾಯಿತು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.