ಪ್ರಮುಖ ಸುದ್ದಿಗಳು

ಗ್ರಾಮೀಣ ಜನರ ಸಮಸ್ಯೆ ನಿವಾರಣೆಗೆ ಜಿಲ್ಲಾಧಿಕಾರಿ ತಂಡ ಭೇಟಿ: ಡಿಸಿ ಮುಲ್ಲೈ ಮುಗಿಲನ್

ಮಂಗಳೂರು: ಕಂದಾಯ ಸೇರಿದಂತೆ ಅಗತ್ಯ ಜನರ ಸಮಸ್ಯೆ ನಿವಾರಣೆಗೆ ಗ್ರಾಮಾಂತರ ಪ್ರದೇಶಗಳಿಂದ ಜಿಲ್ಲಾಧಿಕಾರಿ ಕಚೇರಿಗೆ ಜನರ ಅಲೆದಾಟವನ್ನು ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ತಂಡ ವಾರಕ್ಕೊಮ್ಮೆ ಒಂದೊಂದು ತಾಲೂಕು ತಾಲೂಕುಗಳಿಗೆ ಭೇಟಿ ನೀಡಲಿದೆ ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ. ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಬುಧವಾರ ಆಯೋಜಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಪತ್ರಕರ್ತರಿಂದ ಜಿಲ್ಲೆ ಹಾಗೂ ನಗರ ವ್ಯಾಪ್ತಿಯ ಹಲವು ಸಮಸ್ಯೆಗಳನ್ನು ಅರಿತುಕೊಂಡ ಬಳಿಕ ಅವರು ಈ ವಿಷಯ ತಿಳಿಸಿದರು.

ಮುಂದಿನ ವಾರದಿಂದ ಈ ಭೇಟಿ ಕಾರ್ಯಕ್ರಮ ನಡೆಯಲಿದ್ದು, ವಾರದಲ್ಲಿ ಒಂದು ದಿನವನ್ನು ಅದಕ್ಕಾಗಿ ನಿಗದಿಪಡಿಸಲಾಗುವುದು. ಆ ದಿನ ಆರಂಭದಲ್ಲಿ ಜಿಲ್ಲಾಡಳಿತದ ತಂಡ ನಿಗದಿತ ತಾಲೂಕು ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಇತ್ಯರ್ಥಪಡಿಸಲಿದೆ. ಬಳಿಕ ತಾನು ಕೂಡಾ ತಾಲೂಕು ಕೇಂದ್ರಗಳಿಗೆ ಭೇಟಿ ನೀಡಲಿದ್ದೇನೆ. ಜನರನ್ನು ತಾಲೂಕು ಮಟ್ಟದಲ್ಲಿಯೇ ಭೇಟಿಯಾಗಿ ಸಮಸ್ಯೆ ಇತ್ಯರ್ಥ ಪಡಿಸುವುದು ಇದರ ಉದ್ದೇಶವಾಗಿದ್ದು, ಬಳಿಕ ಹೋಬಳಿ ಮಟ್ಟದಲ್ಲಿಯೂ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಶೀಘ್ರ ಸಾರಿಗೆ ಪ್ರಾಧಿಕಾರದ ಸಭೆ:
ಜಿಲ್ಲೆಯಲ್ಲಿ ಸರಕಾರಿ ಬಸ್ಸುಗಳ ಓಡಾಟಕ್ಕಿರುವ ಸಮಸ್ಯೆ, ಇಲೆಕ್ಟ್ರಿಕ್ ಆಟೋರಿಕ್ಷಾಗಳು ಸೇರಿದಂತೆ ಸಾರಿಗೆ ಸಂಬಂಧಿಸಿತ ಸಮಸ್ಯೆಗಳ ಬಗ್ಗೆ ಶೀಘ್ರವೇ ರಸ್ತೆ ಸಾರಿಗೆ ಪ್ರಾಧಿಕಾರದ ಸಭೆ ನಡೆಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು. ರಾಷ್ಟ್ರೀಯ ಹೆದ್ದಾರಿ, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆಗಳಲ್ಲಿನ ಹೊಂಡ ಗುಂಡಿಗಳು, ಒಳಚರಂಡಿ ಅವ್ಯವಸ್ಥೆ ಮೊದಲಾದ ಬಗ್ಗೆ ಎನ್‌ಎಚ್ ಅಧಿಕಾರಿಗಳು ಹಾಗೂ ಮನಪಾ ಅಧಿಕಾರಿಗಳ ಜತೆ ಜಂಟಿ ಪರಿಶೀಲನಾ ಸಭೆ ನಡೆಸಿ ಕ್ರಮ ವಹಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು. ಮಂಗಳೂರು ತಾಲೂಕು ಸೇರಿದಂತೆ ಜಿಲ್ಲೆಯ ಗ್ರಾಮಾಂತರ ತಾಲೂಕುಗಳಲ್ಲಿನ ಜಟಿಲ ಸಮಸ್ಯೆಯಾಗಿರುವ ಕಂದಾಯ ಅರಣ್ಯ ಭೂಮಿಯ ವರ್ಗೀಕರಣಕ್ಕೆ ಸಂಬಂಧಿಸಿ ಸರ್ವೆ ಕೇವಲ ಜಿಲ್ಲೆಯನ್ನು ಸೀಮಿತವಾಗಿ ನಡೆಸಲು ಸಾಧ್ಯತೆ ಬಗ್ಗೆ ಪರಿಶೀಲಿಸಲಾ ಗುವುದು. ಇದೇ ವೇಳೆ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಜಿಪಿಎಸ್ ಆಧಾರದಲ್ಲಿ ಅರಣ್ಯ ಹಾಗೂ ಕಂದಾಯ ಭೂಮಿಯನ್ನು ಗುರುತಿಸುವಿಕೆಯನ್ನು ವಿಶೇಷ ಅಧ್ಯಯನ ಹಾಗೂ ವಿಶೇಷ ತಂಡದ ಮೂಲಕ ನಡೆಸಲು ಪ್ರಯತ್ನಿಸಲಾಗುವುದು ಎಂದು ಮುಲ್ಲೈ ಮುಗಿಲನ್ ತಿಳಿಸಿದರು. ಗ್ರಾಮೀಣ ಭಾಗಗಳಲ್ಲಿ ತಾಲೂಕು ಆಸ್ಪತ್ರೆ, ತಾಲೂಕು ಕಚೇರಿಗಳಲ್ಲಿ ಸಿಬ್ಬಂದಿ ಕೊರತೆ ನೀಗಿಸುವ ನಿಟ್ಟಿನಲ್ಲಿ ನಿಗದಿತ ದಿನಗಳಲ್ಲಿ ಸಾರ್ವಜನಿಕರಿಗೆ ಸಂಬಂಧಪಟ್ಟವರು ಲಭ್ಯ ಇರುವಂತೆ ಹಾಗೂ ಈ ಮಾಹಿತಿ ಕಚೇರಿಗಳಲ್ಲಿಯೂ ಲಭ್ಯವಾಗುವಂತೆ ಕ್ರಮ ವಹಿಸಲಾಗುವುದು ಎಂದರು. ಮುಲ್ಕಿ, ಉಳ್ಳಾಲ, ಕಡಬ, ಮೂಡಬಿದ್ರೆ ಮೊದಲಾದ ಹೊಸ ತಾಲೂಕುಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಸಲವಾಗಿ ಕಂದಾಯ ಇಲಾಖೆಯ ಮಾಹಿತಿ ಪಡೆದಿದೆ. ಶೀಘ್ರದಲ್ಲೇ ತಾಲೂಕು ಕೇಂದ್ರಗಳಲ್ಲಿ ಸೌಕರ್ಯಗಳು ಲಭ್ಯವಾಗಲಿವೆ ಎಂದು ಅವರು ಹೇಳಿದರು.

ಪ್ರವಾಸೋದ್ಯಮ ಉತ್ತೇಜಿಸುವ ಕಾರ್ಯಕ್ರಮ
ಬಹು ಸಂಖ್ಯೆಯಲ್ಲಿ ಶಿಕ್ಷಣ, ಆರೋಗ್ಯ, ಧಾರ್ಮಿಕ ಕೇಂದ್ರಗಳ ಜತೆಗೆ ಬೀಚ್‌ಗಳಿಂದ ಕೂಡಿರುವ ದ.ಕ. ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶವಿದೆ. ಜಲಕ್ರೀಡೆ (ಸರ್ಫಿಂಗ್)ಯ ಜತೆಗೆ ಪಿಲಿಕುಲದ ಡಾ. ಶಿವರಾಮ ಕಾರಂತ ನಿಸರ್ಗ ಧಾಮವನ್ನು ಒಳಗೊಂಡು ಈ ಎಲ್ಲಾ ಕೇಂದ್ರಗಳನ್ನು ಕ್ರೋಢೀಕರಿಸಿಕೊಂಡು ವಿಭಿನ್ನ ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ನಿಗದಿತ ಸಮಯಗಳಲ್ಲಿ ರೂಪಿಸಿಕೊಂಡು ಪ್ರವಾಸಿಗರನ್ನು ಆಕರ್ಷಿಸಲು ಹಾಗೂ ಪ್ರವಾಸಿಗರು ಕನಿಷ್ಟ 10 ದಿನಗಳ ಕಾಲ ಇಲ್ಲಿ ಉಳಿದು ಜಿಲ್ಲೆಯ ಸೊಬಗನ್ನು ಸವಿಯುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಉತ್ತೇಜಿಸುವ ಕಾರ್ಯಕ್ರಮ ರೂಪಿಸಬೇಕಾಗಿದೆ. ಈ ಹಂತದಲ್ಲಿ ಪ್ರಥಮ ಕಾರ್ಯವಾಗಿ ಜಿಲ್ಲೆಯ ಪ್ರವಾಸಿ ತಾಣಗಳ ಪಟ್ಟಿ ಮಾಡಿ ಜಿಲ್ಲಾಡಳಿತವು ಪ್ರವಾಸೋದ್ಯಮ ಇಲಾಖೆಯ ಸಹಕಾರದಲ್ಲಿ ಪೋರ್ಟಲ್ ಮೂಲಕ ಪ್ರಚಾರ ಮಾಡುವ ಕಾರ್ಯವನ್ನು ಮಾಡಲಿದೆ. ತುರ್ತಾಗಿ ನಗರದ ಪ್ರಮುಖ ಬೀಚ್‌ಗಳು, ಪ್ರವಾಸಿ ಕೇಂದ್ರಗಳ ಸೂಚನಾ ಫಲಕಗಳನ್ನು ಅಳವಡಿಸುವ ಕಾರ್ಯ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.

ಮಾಧ್ಯಮ ಸಂವಾದದ ವೇದಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಯಕ ನಿರ್ದೇಶಕರಾದ ರವಿರಾಜ್ ಹೆಚ್.ಜಿ, ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಉಪಸ್ಥಿತರಿದ್ದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್. ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ