ಬಂಟ್ವಾಳ ತಾಲೂಕು ಬಿಲ್ಲವ ಮಹಿಳಾ ಸಮಿತಿ ಅಧ್ಯಕ್ಷೆ ಶೈಲಜಾ ರಾಜೇಶ್ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಗಾಣದಪಡ್ಪುವಿನ ಬ್ರಹ್ಮಶ್ರೀ ನಾರಾಯಣ ಸಭಾಂಗಣದಲ್ಲಿ ನಡೆಯಿತು.
ಮಂಗಳೂರಿನ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಪ್ರಿನ್ಸಿಪಾಲ್ ಡಾ. ಆಶಾಲತಾ ಸುವರ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಬಿಲ್ಲವ ಮಹಿಳೆಯರು ಸಾಂಸ್ಕೃತಿಕ ಕ್ಷೇತ್ರದ ಜೊತೆಗೆ ಸಾಹಿತ್ಯ ಕ್ಷೇತ್ರಗಳಲ್ಲೂ ಮುಂದೆ ಬರಬೇಕು. ಇದಕ್ಕೆ ಪೂರಕವಾಗುವಂಥ ಕಾರ್ಯಕ್ರಮಗಳನ್ನು ಮಹಿಳಾ ಸಮಿತಿಯ ಮೂಲಕ ಹಮ್ಮಿಕೊಳ್ಳಬಹುದಾಗಿದೆ ಎಂದು ಸಲಹೆ ನೀಡಿದರು.
ಅಧ್ಯಕ್ಷೆ ಶೈಲಜಾ ರಾಜೇಶ್ ಮಾತನಾಡಿ ಹಿಂದೆ ಪ್ರೋತ್ಸಾಹದ ಕೊರತೆಯಿಂದ ಮಹಿಳೆಯರಿಗೆ ಅವಕಾಶಗಳು ಕಡಿಮೆ ಇತ್ತು. ಇಂದು ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಮಿಂಚುತ್ತಿದ್ದಾರೆ. ನಮ್ಮ ಪ್ರತಿಭೆಯ ಮೂಲಕ ಯಾವ ಕ್ಷೇತ್ರದಲ್ಲೂ ಸಾಧನೆ ಮಾಡಬಹುದು ಎಂದರು.
ಮುಖ್ಯ ಅತಿಥಿಗಳಾಗಿ ಪುತ್ತೂರಿನ ಶಿಶು ಕಲ್ಯಾಣಾಧಿಕಾರಿ ಶ್ರೀಲತಾ, ಉದ್ಯಮಿ ಸಾರಿಕಾ ಪೂಜಾರಿ, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಗುರುಕೃಪಾ, ದ.ಕ. ಜಿಲ್ಲಾ ಮೂರ್ತೆದಾರ ಮಹಾಮಂಡಲದ ಅಧ್ಯಕ್ಷ ಸಂಜೀವ ಪೂಜಾರಿ ಕುಚ್ಚಿಗುಡ್ಡೆ ಭಾಗವಹಿಸಿ ಶುಭ ಕೋರಿದರು. ಬಿಲ್ಲವ ಮಹಿಳಾ ಸಮಿತಿಯ ನಿಕಟಪೂರ್ವಾಧ್ಯಕ್ಷೆ ರೇವತಿ ಅನಿಸಿಕೆ ವ್ಯಕ್ತಪಡಿಸಿದರು. ಮಹಿಳಾ ಮತು ಮಕ್ಕಳ ಕಲ್ಯಾಣ ಇಲಾಖೆಯ ನಿವೃತ್ತ ಅಧಿಕಾರಿ ಭಾರತಿ ಕುಂದರ್, ನಿಕಟಪೂರ್ವಾಧ್ಯಕ್ಷೆ ರೇವತಿ, ಬ್ರಹ್ಮಶ್ರೀ ನಾರಯಣ ಸಭಾಭವನದ ಮ್ಯಾನೇಜರ್ ಜಯಶ್ರೀ ಅವರನ್ನು ಸನ್ಮಾನಿಸಲಾಯಿತು. ಸಮುದಾಯದ ಅರ್ಹ ಫಲಾನುಭವಿಗಳಿಗೆ ಆರ್ಥಿಕ ಸಹಕಾರ ನೀಡಲಾಯಿತು.
ಅಧ್ಯಕ್ಷೆ ಶೈಲಜಾ ರಾಜೇಶ್ ಸ್ವಾಗತಿಸಿದರು, ಕಾರ್ಯದರ್ಶಿ ಸರೋಜಿನಿ ವಂದಿಸಿದರು. ಭಾರತಿ ಕುಂದರ್ ಹಾಗೂ ಲೀಲಾವತಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶಾಂಭವಿ ಕಿರುಚಿತ್ರ ಪ್ರದರ್ಶನ, ಶ್ರೀಶೈಲಾ ಕಲಾನೃತ್ಯ ತಂಡ ಸಹಿತ ಮತ್ತಿತರರಿಂದ ನೃತ್ಯ ಪ್ರದರ್ಶನ, ವಿಠಲ ನಾಯಕ್ ಮತ್ತು ಬಳಗದಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಿತು.