ಬಂಟ್ವಾಳ: ಧರ್ಮಕ್ಕೂ ಏಕರೂಪ ನಾಗರಿಕ ಸಂಹಿತೆಗೂ ಸಂಬಂಧವೇ ಇಲ್ಲ, ಈ ಕುರಿತು ಹಲವು ತಪ್ಪು ಕಲ್ಪನೆಗಳಿವೆ ಎಂದು ಹೈಕೋರ್ಟ್ ಹಿರಿಯ ನ್ಯಾಯವಾದಿ ಅರುಣಶ್ಯಾಮ್ ಹೇಳಿದ್ದಾರೆ.
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಏಕರೂಪ ನಾಗರಿಕ ಸಂಹಿತೆ ಕುರಿತ ‘ಮಂಥನ’ ಕಾರ್ಯಕ್ರಮ ಪುತ್ತೂರು ವಿವೇಕಾನಂದ ವಿದ್ಯಾಕೇಂದ್ರ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ ಮಾತನಾಡಿದ ಅರುಣಶ್ಯಾಮ್, ಮದುವೆ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ವಿಲೇವಾರಿಗೆ ಸಂಬಂಧಿಸಿದಂತೆ ನಾಗರಿಕ ಹಕ್ಕು ಮತ್ತು ಕರ್ತವ್ಯಗಳ ನಿರ್ವಹಣೆಯಲ್ಲಿ ಸಮಾನತೆ ಸಾಧಿಸುವುದು ಏಕರೂಪ ನಾಗರಿಕ ಸಂಹಿತೆ ಉದ್ದೇಶ. ವಿಭಿನ್ನ ಧರ್ಮಗಳಿಗೆ ಸೇರಿದವರಿಗೆಲ್ಲ ಒಂದೇ ಕಾನೂನು ಅನ್ವಯಿಸುವುದೇ ಸಮಾನ ನಾಗರಿಕ ಸಂಹಿತೆಯಾಗಿದೆ. ಪ್ರಮುಖ ಧರ್ಮಗಳ ವೈಯಕ್ತಿಕ ಕಾನೂನುಗಳ ಬದಲಿಗೆ ಎಲ್ಲಾ ಧರ್ಮದ ಜನರನ್ನು ಸಮಾನವಾಗಿ ಕಾಣುವ ಕಾಯಿದೆ ಇದಾಗಿದೆ. ಈ ಕಾಯ್ದೆ ಜಾರಿಗೆ ಬಂದರೆ ಅದರಿಂದ ತಮ್ಮ ವೈಯಕ್ತಿಕ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಒದಗಲಿದೆ ಎಂಬ ಆತಂಕ ಧಾರ್ಮಿಕ ಅಲ್ಪಸಂಖ್ಯಾತರಲ್ಲಿ ಇದೆ.ಆದರೆ ವೈಯುಕ್ತಿಕ ಕಾನೂನುಗಳಲ್ಲಿ ಏಕ ರೂಪತೆ ತರುವುದೇ ಇದರ ನಿಜವಾದ ಉದ್ದೇಶವಾಗಿದೆ. ಧರ್ಮಕ್ಕೂಇದಕ್ಕೂಯಾವುದೇ ಸಂಬಂಧವೇ ಇಲ್ಲ. ಧಾರ್ಮಿಕ ಸ್ವಾತಂತ್ರ್ಯ ಕಸಿದುಕೊಳ್ಳಲಾಗುವುದಿಲ್ಲ. ಕಾನೂನು ವ್ಯವಸ್ಥೆ ಮೇಲಿನ ಒತ್ತಡ ನಿವಾರಣೆಗೆ, ಜನಸಂಖ್ಯಾ ಸ್ಪೋಟ, ಆರ್ಥಿಕ ತೊಂದರೆ, ನಿರುದ್ಯೋಗ ಮುಂತಾದವುಗಳ ಕಾರಣದಿಂದ ಈ ಕಾಯ್ದೆಯ ಅಗತ್ಯವಿದೆ ಎಂದವರು ಹೇಳಿದರು.
ಶ್ರೀರಾಮ ವಿದ್ಯಾಕೇಂದ್ರ ಅಧ್ಯಕ್ಷರಾದ ನಾರಾಯಣ ಸೋಮಯಾಜಿ, ಆಡಳಿತ ಮಂಡಳಿ ಸದಸ್ಯರಾದ ಲಕ್ಷ್ಮಿ ರಘುರಾಜ್, ಕೋಶಾಧಿಕಾರಿಯಾದ ಶಿವಗಿರಿ ಸತೀಶ್ ಭಟ್, ಸಂಚಾಲಕರಾದ ವಸಂತ ಮಾಧವ, ಸಹ ಸಂಚಾಲಕರಾದ ರಮೇಶ್‌ಎನ್, ರಾಷ್ಟ್ರೀಯ ಸ್ವಯಂಸೇವಿಕ ಸಮಿತಿಯ ಕಾರ್ಯಕಾರಿಣಿ ಸದಸ್ಯರಾದ ಡಾ.ಕಮಲ ಪ್ರಭಾಕರ್ ಭಟ್, ಶ್ರೀರಾಮ ಪ್ರೌಢಶಾಲೆಯ ಆಡಳಿತಾಧಿಕಾರಿ ಶಾಂಭವಿ ಹಾಗೂ ಶ್ರೀ ರಾಮ ವಿದ್ಯಾಕೇಂದ್ರದ 140 ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಪದವಿಪೂರ್ವ ವಿಭಾಗದ ಉಪನ್ಯಾಸಕರಾದ ರಮೇಶ್ ನಿರೂಪಿಸಿ ಸ್ವಾಗತಿಸಿ ವಂದಿಸಿದರು.