ಕಲ್ಲಡ್ಕ

ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಟಿಡೊಂಜಿ ಕೂಟ

ಬಂಟ್ವಾಳ: ಆಟಿಯ ವೈವಿಧ್ಯಮಯ ತಿನಿಸುಗಳನ್ನು ಒಂದೇ ಬಾರಿ ತಿನ್ನುವ ಕ್ರಮ ಆಟಿಯ ಆಚರಣೆ ಅಲ್ಲ. ಆಟಿ ಒಂದು ದಿನದ ಆಚರಣೆಯೂ ಅಲ್ಲ ಅದು ಒಂದು ತಿಂಗಳ ಆಚರಣೆ. ತುಳುನಾಡಿನ ಔಷಧಿಗಳ ಮಹತ್ವವನ್ನು ತಿಳಿಯೋಣ ಎಂದು‌ ಜನಪದ ಚಿಂತಕರೂ ಉದ್ಯಾವರ ಎಸ್ ಡಿ ಎಮ್ ಆಯುರ್ವೇದ ವೈದ್ಯಕೀಯ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ವೈ.ಎನ್.ಶೆಟ್ಟಿ ಹೇಳಿದರು.

ಅವರು ಮಾಣಿ ಪೆರಾಜೆಯ ವಿದ್ಯಾನಗರಪಾಳ್ಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜು.30ರಂದು ನಡೆದ ಆಟಿಡೊಂಜಿ ಕೂಟ ಕಾರ್ಯಕ್ರಮವನ್ನು ಚೆನ್ನೆಮನೆ ಆಟ ಆಡಿ, ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಮನುಷ್ಯ ಪ್ರಕೃತಿಯೊಂದಿಗೆ ಬದುಕಿದ್ದ ಕಾಲ ಆಟಿ ತಿಂಗಳು. ಹಿರಿಯರು ಹೇಳಿಕೊಟ್ಟ ಔಷಧಿಗಳ ಮಹತ್ವ ಇತ್ತೀಚಿನ ದಿನಗಳಲ್ಲಿ ನಶಿಸಿ ಹೋಗುತ್ತಿದೆ. ಇಂದಿನ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ತುಳು ಸಂಸ್ಕೃತಿ, ಸಂಪ್ರದಾಯಗಳನ್ನು ತಿಳಿಹೇಳುವ ಕೆಲಸವಾಗಬೇಕು. ತುಳು ಭಾಷೆಯನ್ನು ಆಡೋಣ ಎಂದು ಅವರು ಹೇಳಿದರು.

ಬಾಲವಿಕಾಸ ಟ್ರಸ್ಟ್ ನ ಅಧ್ಯಕ್ಷರು ಹಾಗೂ ಶಾಲೆಯ ಸಂಚಾಲಕರಾದ ಪ್ರಹ್ಲಾದ್ ಶೆಟ್ಟಿ ಜೆ. ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರಕೃತಿ ಪ್ರತಿ ವರ್ಷ ನಮಗೆ ಹೊಸ ಅನುಭವಗಳನ್ನು ನೀಡುತ್ತದೆ. ಆಟಿ ತಿಂಗಳಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ, ಆಯುಷ್ಯ ದೊರೆಯಲಿ ಎಂದು ಶುಭ ಹಾರೈಸಿದರು. ಇದೇ ಸಂದರ್ಭ ಶಾಲಾ ವಿದ್ಯಾರ್ಥಿಗಳಿಂದ ತುಳುನಾಡಿನ ಸಂಸ್ಕೃತಿ,ಪರಂಪರೆಯನ್ನು ಸಾರುವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ತುಳು ಸಂಸ್ಕೃತಿಯ ಅವಿಭಾಜ್ಯ ಅಂಗಗಳಾದ, ಪಾಡ್ದನ, ಪರಶುರಾಮ, ಕೋಟಿ ಚೆನ್ನಯರ ರೂಪಕ, ಕಂಗೀಲು‌, ಯಕ್ಷಗಾನ ಮತ್ತು ಹುಲಿ ವೇಷವನ್ನು ಪ್ರಸ್ತುತಪಡಿಸಿದರು. ತುಳುನಾಡಿನ  ತಿನಿಸುಗಳಾದ ಉಪ್ಪಡಚ್ಚಿಲ್, ತಿಮರೆ ಚಟ್ನಿ, ಕಡ್ಲೆ, ಚೇವು, ಅಂಬಟೆ, ಹಲಸಿನ ಪಾಯಸ ಮುಂತಾದವುಗಳ ವಿಶೇಷ ಭೋಜನವನ್ನು ಏರ್ಪಡಿಸಲಾಗಿತ್ತು.

ಬಾಲವಿಕಾಸ ಟ್ರಸ್ಟಿನ ಉಪಾಧ್ಯಕ್ಷರಾದ ಯತಿರಾಜ್ ಕೆ.ಎನ್., ಕಾರ್ಯದರ್ಶಿ ಮಹೇಶ್ ಶೆಟ್ಟಿ ಜೆ, ಸದಸ್ಯೆ ಸುಭಾಷಿಣಿ ಎ. ಶೆಟ್ಟಿ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಕಸ್ತೂರಿ ಪಿ. ಶೆಟ್ಟಿ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಶಾಲಾ ಮುಖ್ಯೋಪಾದ್ಯಾಯಿನಿ ವಿಜಯಲಕ್ಷ್ಮಿ ವಿ. ಶೆಟ್ಟಿ ಸ್ವಾಗತಿಸಿ, ಶಾಲಾ ಆಡಳಿತಾಧಿಕಾರಿ ರವೀಂದ್ರ ದರ್ಬೆ ವಂದಿಸಿದರು. ಶಿಕ್ಷಕಿಯರಾದ‌ ಯಜ್ಞೇಶ್ವರಿ ಎನ್. ಶೆಟ್ಟಿ‌ ಮತ್ತು ಶಿಕ್ಷಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ತನ್ವಿ ಎಸ್. ಹಾಗೂ ಚಿನ್ಮಯಿ ನಿರೂಪಿಸಿದರು.

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ