ಸಾಮಾನ್ಯವಾಗಿ ರಸ್ತೆ ನಿರ್ಮಾಣ, ಅದ್ರಲ್ಲೂ ಹೆದ್ದಾರಿ ಪುನರ್ ನವೀಕರಣ ಮಾಡುವ ಸಂದರ್ಭ ಗ್ರಾಮೀಣ ಬಸ್ಸುಗಳು ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಜಾಗವೆಂದು ಬಸ್ ಬೇ ಇರುತ್ತದೆ. ರಸ್ತೆಯ ಪಕ್ಕಕ್ಕೆ ಸಣ್ಣ ಮಾರ್ಗ ಮಾಡಿ, ಅಲ್ಲಿ ಬಸ್ ನಿಲ್ಲಿಸಲಾಗುತ್ತದೆ. ಅಲ್ಲೇ ಸಣ್ಣ ಪ್ರಯಾಣಿಕರ ಶೆಲ್ಟರ್ ಇರುತ್ತದೆ. ಬಸ್ ಬಂದ ಕೂಡಲೇ ಅಲ್ಲಿ ಪ್ರಯಾಣಿಕ ಹತ್ತುತಾನೆ. ಇಂಥದ್ದನ್ನೇ ನೋಡಿದವರು, ಸ್ವಲ್ಪ ಬದಲಾವಣೆಗೆ ಬಿ.ಸಿ.ರೋಡಿನಿಂದ ಮಂಗಳೂರು ಮಾರ್ಗ ನೋಡಬೇಕು. ಬಸ್ಸು ಹೆದ್ದಾರಿಯಲ್ಲೇ ನಿಂತು ಪ್ರಯಾಣಿರನ್ನು ಹತ್ತಿಸಿಕೊಳ್ಳುತ್ತವೆ. ಹಿಂದಿನಿಂದ ವೇಗವಾಗಿ ವಾಹನವೇನಾದರೂ ಬಂದರೆ ಗಲಿಬಿಲಿಗೊಳ್ಳಬೇಕು.
ಇಂಥ ಹೊತ್ತಿನಲ್ಲಿ ರಾಂಗ್ ಸೈಡ್ ನಿಂದ ಬರುವುದು, ದಿಢೀರನೆ ಎದುರು ಸಾಗುತ್ತಿರುವ ಬಸ್ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ನಿಲ್ಲಿಸಿದರೆ ಏನಾಗುತ್ತದೆ? ಈಗಾಗಲೇ ಇದರ ಸ್ಯಾಂಪಲ್ ಅನ್ನು ಸುರತ್ಕಲ್ ಬಿ.ಸಿ.ರೋಡ್ ಚತುಷ್ಪಥ ಹೆದ್ದಾರಿಯ ನಂತೂರಿನಿಂದ ಬಿ.ಸಿ.ರೋಡ್ ವರೆಗಿನ ಭಾಗದಲ್ಲಿ ನೋಡಿರುತ್ತೀರಿ. ಇದರ ಮುಂದುವರಿದ ಭಾಗದಂತೆ ಗೋಚರವಾಗುತ್ತಿರುವುದು ಬಿ.ಸಿ.ರೋಡ್ ಅಡ್ಡಹೊಳೆ ಚತುಷ್ಪಥ ನಿರ್ಮಾಣ ಕಾಮಗಾರಿಯಲ್ಲಿ ಮಾಣಿವರೆಗಿನ ರಸ್ತೆ. ಜನರ ಅನುಕೂಲಕ್ಕೆ ರಸ್ತೆಗಳು ನಿರ್ಮಾಣವಾಗಬೇಕೇ ಹೊರತು, ರಸ್ತೆಗೆ ಅನುಗುಣವಾಗಿ ಜನರು ಇರುವುದಲ್ಲ ಎಂಬುದನ್ನು ಮರೆತಂತೆ ಎಲ್ಲೆಲ್ಲಿ ಜಂಕ್ಷನ್ ಗಳಿವೆಯೋ ಅಲ್ಲಿ ಬಸ್ ಬೇ ಮಾಡಿ, ಬಸ್ ನಿಲ್ದಾಣವನ್ನು ವ್ಯವಸ್ಥಿತವಾಗಿ ನಿರ್ಮಿಸಲು ಆಸ್ಪದ ನೀಡಬೇಕಾದ ಜಾಗಗಳಲ್ಲಿ ಬಸ್ಸು ನಿಲ್ಲುವ ಜಾಗ ಬಿಡಿ, ಪ್ರಯಾಣಿಕರೂ ನಿಲ್ಲಲು ಅಸಾಧ್ಯವಾದಂಥ ಸ್ಥಿತಿ ಇದೆ. ಯಾರಾದರೂ ಪೀಕ್ ಅವರ್ ನಲ್ಲಿ ಅಂದರೆ ಬೆಳಗ್ಗೆ 7ರಿಂದ 10, ಅಥವಾ ಸಂಜೆ 3.30ರಿಂದ 7 ಗಂಟೆಯ ಅವಧಿಯಲ್ಲಿ ಪಾಣೆಮಂಗಳೂರು, ಮೆಲ್ಕಾರ್, ಕಲ್ಲಡ್ಕ, ಮಾಣಿ ಕಡೆ ದೃಷ್ಟಿ ಹಾಯಿಸಿದರೆ, ಜನರ ಪರದಾಟ ನೋಡಲು ಸಿಗುತ್ತದೆ. ಈಗಾಗಲೇ ಅಡ್ಯಾರ್, ವಳಚ್ಚಿಲ್, ಫರಂಗಿಪೇಟೆ, ತುಂಬೆ, ಕೈಕಂಬತಿರುವು, ಬಿ.ಸಿ.ರೋಡ್ ಗಳಲ್ಲಿ ಚತುಷ್ಪಥ ರಸ್ತೆಯಲ್ಲೇ ಬಸ್ಸುಗಳು ದಿಢೀರ್ ಬ್ರೇಕ್ ಹಾಕಿ ಹಿಂಬದಿ ವಾಹನ ಸವಾರರನ್ನು ಗಲಿಬಿಲಿ ಮಾಡುವ ದೃಶ್ಯಗಳನ್ನು ಗಮನಿಸಿರಬಹುದು. ಥೇಟ್ ಅಂಥದ್ದೇ ಸೀನ್ ಗಳು ಇನ್ನು ಬಿ.ಸಿ.ರೋಡ್ ಮಾಣಿ ಮಧ್ಯೆ ನಿರ್ಮಾಣವಾಗುವ ದೈತ್ಯಾಕಾರದ ಫ್ಲೈಓವರ್ ಹಾಗೂ ಅಂಡರ್ ಪಾಸ್ ಗಳ ಆಜುಬಾಜುಗಳಲ್ಲಿರುವ ಸರ್ವೀಸ್ ರಸ್ತೆಯಲ್ಲಿ ಕಾಣಸಿಗುತ್ತಿದೆ. ಪ್ರಮುಖ ಜಂಕ್ಷನ್ ಗಳು ಯಾವುದು: ಬಸ್ ನಿಲ್ದಾಣಗಳು ಹಾಗೂ ಬಸ್ ಬೇಗಳು ಇರಲೇಬೇಕಾದ ಜಾಗವೆಂದರೆ, ಪಾಣೆಮಂಗಳೂರು ಕಲ್ಲುರ್ಟಿ ಸನ್ನಿಧಾನದ ಬಳಿಯ ಜಾಗ, ಮೆಲ್ಕಾರ್, ಕಲ್ಲಡ್ಕ, ಮಾಣಿ. ಇನ್ನು ಸೂರಿಕುಮೇರು, ದಾಸಕೋಡಿ ಪ್ರದೇಶಗಳಲ್ಲೂ ಪ್ರಯಾಣಿಕರು ಬಸ್ಸಿಗಾಗಿ ಕಾಯುತ್ತಾರೆ. ಇಂಥ ಜಾಗದಲ್ಲೂ ಬಸ್ ಗಳು ಸೈಡಿಗೆ ಬಂದು ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ವ್ಯವಸ್ಥೆಗೆ ಜಾಗ ಇನ್ನೂ ನಿಗದಿಯಾಗಿಲ್ಲ.