ಬಂಟ್ವಾಳ: ಬಂಟ್ವಾಳ ಕನ್ನಡ ಭವನದಲ್ಲಿ ಎರಡು ದತ್ತಿ ಉಪನ್ಯಾಸಗಳು ನಡೆದವು. ಡಾ.ಜಾನಕಿ ಸುಂದರೇಶ್ ಸ್ಥಾಪಿತ ಕಳಸ ಪುಟ್ಟದೇವರಯ್ಯ ನಾಗಮ್ಮ ದತ್ತಿ ಉಪನ್ಯಾಸವನ್ನು ಮಾಡಿದ ಕವಯತ್ರಿ, ಉಪನ್ಯಾಸಕಿ ಗೀತಾ ಎಸ್.ಕೊಂಕೋಡಿ, ಕಾದಂಬರಿಕಾರ್ತಿ ಗಂಗಾ ಪಾದೇಕಲ್ ಅವರ ಮೌನರಾಗಗಳು ಕಾದಂಬರಿ ಕುರಿತು ಮಾತನಾಡಿದರು. ಸ್ತ್ರೀಯ ಬದುಕಿನ ನೈಜ ಚಿತ್ರಣವನ್ನು ರೋಗ ರುಜಿನಗಳನ್ನು ಎದುರಿಸಿ ನಿಲ್ಲುವ ಸ್ಥೈರ್ಯವನ್ನು ಕಾದಂಬರಿ ನೀಢುತ್ತದೆ ಎಂದರು.
ಡಾ.ಮನಮೋಹನ ವಿಟ್ಲ ಸ್ಥಾಪಿತ ಪ್ರೊ. ಎಂ.ರಾಮಕೃಷ್ಣ ಭಟ್ ದತ್ತಿ ಉಪನ್ಯಾಸದಲ್ಲಿ ಯುವಕವಿ, ಉಪನ್ಯಾಸಕ ರಮೇಶ್ ಮೆಲ್ಕಾರ್ ಸಂಸ್ಕೃತ, ಕನ್ನಡಗಳ ಕುರಿತು ಮಾತನಾಡಿದರು. ಐದು ಸಾವಿರ ವರ್ಷಗಳಿಂತಲೂ ಅಧಿಕ ಇತಿಹಾಸವಿರುವ ಸಂಸ್ಕೃತ ಎಲ್ಲ ಭಾಷೆಗಳಿಗೂ ತಾಯಿ ಇದ್ದಂತೆ, ಕನ್ನಡಕ್ಕಂತೂ ಸಂಸ್ಕೃತ ಭಾಷೆ ಎರವಲು ಅನಿವಾರ್ಯ ಎಂದರು. ಕಸಾಪ ಗೌರವ ಕಾರ್ಯದರ್ಶಿ ರಮಾನಂದ ನೂಜಿಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾಧ್ಯಕ್ಷ ಡಾ. ಎಂ.ಪಿ.ಶ್ರೀನಾಥ್, ತಾಲೂಕು ಅಧ್ಯಕ್ಷ ವಿಶ್ವನಾಥ ಬಂಟ್ವಾಳ, ಗೌರವ ಕಾರ್ಯದರ್ಶಿ ವಿ.ಸು.ಭಟ್, ಗೌರವ ಕೋಶಾಧಿಕಾರಿ ಅಬ್ದುಲ್ ರಹಿಮಾನ್ ಡಿ.ಬಿ. ಉಪಸ್ಥಿತರಿದ್ದರು. ಕವಿ, ಪ್ರಾಧ್ಯಾಪಕ ಎಂ.ಡಿ.ಮಂಚಿ ಸ್ವಾಗತಿಸಿದರು. ಕವಯತ್ರಿ ರಜನಿ ಚಿಕ್ಕಯ್ಯಮಠ ವಂದಿಸಿದರು.