ಭ್ರಾಮರಿ ಯಕ್ಷಮಿತ್ರರು ಮಂಗಳೂರು ಟ್ರಸ್ಟ್ ಆಶ್ರಯದಲ್ಲಿ ಆ.12ರಂದು ಸಂಜೆ7ರಿಂದ ಮರುದಿನ ಮುಂಜಾನೆಯವರೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿರುವ ಆರನೇ ವರ್ಷದ ಯಕ್ಷ ವೈಭವ ಹಾಗೂ ಭ್ರಾಮರೀ ಯಕ್ಷಮಣಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಮಂಗಳೂರಿನಲ್ಲಿ ಬುಧವಾರ ಬಿಡುಗಡೆಗೊಂಡಿತು.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅವರು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ, ‘ಕಳೆದ ೫ ವರ್ಷಗಳಿಂದ ಭ್ರಾಮರಿ ಯಕ್ಷಮಿತ್ರರು ಜತೆಗೂಡಿ ಯಕ್ಷವೈಭವವನ್ನು ಸಂಘಟಿಸುತ್ತಾ ಬಂದಿರುವುದು ಸಂತಸದ ಸಂಗತಿ. ಸಂಘಟನೆಗಳು ಬಲಯುತವಾದಾಗ ಮಾತ್ರ ನಮ್ಮ ಸಂಸ್ಕೃತಿ, ಸಂಸ್ಕಾರ, ಸಾಂಸ್ಕೃತಿಕ ಲೋಕದ ಅನಾವರಣಕ್ಕೆ ಮತ್ತಷ್ಟು ಅವಕಾಶಗಳು ತೆರೆದುಕೊಳ್ಳುತ್ತದೆ ಎಂದರು.
ಯಕ್ಷವೈಭವದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಶ್ರೀ ಮಂಗಳಾದೇವಿ ಸೇವಾ ಸಮಿತಿಯ ಅಧ್ಯಕ್ಷ ದಿಲ್‌ರಾಜ್ ಆಳ್ವ ಅವರು ‘ಯಕ್ಷವೈಭವವನ್ನು ಪ್ರತೀ ವರ್ಷ ಯಶಸ್ವಿಯಾಗಿ ಸಂಘಟಿಸುವ ಯಕ್ಷಮಿತ್ರರ ಕಾರ್ಯ ಶ್ಲಾಘನೀಯ. ವಾಟ್ಸಾಪ್ ಬಳಗದ ಮೂಲಕವೇ ಹುಟ್ಟಿಕೊಂಡ ಸಂಸ್ಥೆ ಯಕ್ಷಗಾನವನ್ನೇ ಆದ್ಯತೆಯಾಗಿರಿಸಿಕೊಂಡು ತನ್ನ ಕಾರ್ಯಚಟುವಟಿಕೆ ನಡೆಸುತ್ತಿರುವುದು ಮಾದರಿ ಎಂದರು.
ಭ್ರಾಮರಿ ಯಕ್ಷಮಿತ್ರರು ಮಂಗಳೂರು ಟ್ರಸ್ಟ್‌ನ ಪ್ರಮುಖರಾದ ವಿನಯಕೃಷ್ಣ ಕುರ್ನಾಡು ಅಧ್ಯಕ್ಷತೆ ವಹಿಸಿದ್ದರು. ಸತೀಶ್ ಅವರು ಸ್ವಾಗತಿಸಿ ಪ್ರಸ್ತಾವಿಸಿದರು.
ಬಳಗದ ಸದಸ್ಯರಾದ ರವಿಶಂಕರ ಭಟ್, ರವಿಚಂದ್ರ ಶೆಟ್ಟಿ ಅಶೋಕನಗರ, ಶ್ರೀನಿವಾಸ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು