ಬಂಟ್ವಾಳ: ವಾಹನಗಳ ಸಂಚಾರದ ವೇಳೆ ಬಿ.ಸಿ.ರೋಡಿನ ಮೇಲ್ಸೆತುವೆಯ ಮೇಲಿಂದ ಏಕಾಏಕಿ ಚಿಮ್ಮಿತ್ತಿದ್ದ ನೀರಿನ ಸಮಸ್ಯೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಜೆಸಿಐ ಬಂಟ್ವಾಳದ ಸದಸ್ಯರು ಶನಿವಾರ ಮಧ್ಯಾಹ್ನದ ವೇಳೆಗೆ ಶ್ರಮದಾನ ನಡೆಸಿ, ಫ್ಲೈ ಓವರ್‌ನ ರಂಧ್ರಗಳಲ್ಲಿ ತುಂಬಿ ಕೊಂಡಿದ್ದ ಪ್ಲಾಸ್ಟಿಕ್ ಹಾಗೂ ಹೂಳನ್ನು ತೆರವುಗೊಳಿಸಿ ಅಲ್ಲಿ ಕೆರೆಯಂತೆ ಸಂಗ್ರಹಗೊಳ್ಳುತ್ತಿದ್ದ ನೀರನ್ನು ಸರಾಗವಾಗಿ ಹರಿದು ಹೋಗಲು ಅನುವು ಮಾಡಿಕೊಟ್ಟರು.
ಕಳೆದ ಹಲವು ದಿನಗಳಿಂದ ಬಿ.ಸಿ.ರೋಡಿನ ಹೃದಯ ಭಾಗದಲ್ಲಿ ಮೇಲ್ಸೆತುವೆಯ ಮೇಲೆ ನೀರು ಸಂಗ್ರಹಗೊಂಡು ವಾಹನಗಳು ರಭಸವಾಗಿ ಚಲಿಸುವ ವೇಳೆ ಅದು ಚಿಮ್ಮಿ ಕೆಳಭಾಗದಲ್ಲಿ ನಡೆದುಕೊಡು ಹೋಗುವ, ರಸ್ತೆದಾಟುವ ಪಾದಾಚಾರಿಗಳು, ದ್ವಿಚಕ್ರ ವಾಹನ ಸವಾರರ ಮೇಲೆ ಬಿದ್ದು ಮೈಯಿಡೀ ಒದ್ದೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಈ ಅವ್ಯವಸ್ಥೆಯ ವಿರುದ್ದ ಅನೇಕ ಮಂದಿ ಹಿಡಿಶಾಪ ಹಾಕಿದ್ದರು. ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದ್ದು ಅನೇಕ ಮಂದಿ ಈ ವಿಶೇಷ ಅನುಭವವನ್ನು ಪಡೆದುಕೊಂಡಿದ್ದಾರೆ.
ಜೆಸಿಐ ಬಂಟ್ವಾಳದ ಸದಸ್ಯರಾದ ಸದಾನಂದ ಬಂಗೇರ, ಯತೀಶ್ ಕರ್ಕೇರಾ, ಕಿಶೋರ್ ಆಚಾರ್ಯ ಅವರು ಶನಿವಾರ ಸುರಿಯುವ ಮಳೆಯನ್ನು ಲೆಕ್ಕಿಸದೇ ಶ್ರಮದಾನ ನಡೆಸಿ ಫ್ಲೈ ಓವರ್‌ನ ನೀರು ಹರಿಯುವ ರಂಧ್ರಗಳಲ್ಲಿ ತುಂಬಿಕೊಂಡಿದ್ದ ಹೂಳು ತೆರವುಗೊಳಿಸಿ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಕಲ್ಪಿಸಿದರು. ವಾಹನಗಳಲ್ಲಿ ಸಂಚರಿಸುವ ವೇಳೆ ಎಸೆದ ಪ್ಲಾಸ್ಟಿಕ್ ಚೀಲ, ಪ್ಲಾಸ್ಟಿಕ್ ಬಾಟಲ್ ಹಾಗೂ ಮಣ್ಣು ತುಂಬಿಕೊಂಡು ನಾಲ್ಕು ರಂಧ್ರಗಳು ಮುಚ್ಚಿಹೋಗಿತ್ತು.