ಶುಕ್ರವಾರ ಬೆಳಗಿನ ಜಾವ ನಡೆದ ಘಟನೆಯೊಂದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಂದಾವರ ಎಂಬಲ್ಲಿ ಭೂಕುಸಿತದಿಂದ ಮಣ್ಣು ಮನೆಯೊಳಗೆ ಬಿದ್ದು ಹಾನಿಯಾಗಿದ್ದು, ಮನೆಯೊಳಗೆ ಸಿಲುಕಿದವರನ್ನು ರಕ್ಷಿಸಲಾಗಿದೆ. ಅವರ ಪೈಕಿ ಗಂಭೀರ ಸ್ಥಿತಿಯಲ್ಲಿರುವ ಝರೀನಾ (49) ಎಂಬವರನ್ನು ರಕ್ಷಿಸಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಸಾವನ್ನಪ್ಪಿದ್ದಾರೆ.
ಬೆಳಗ್ಗೆ 6 ಗಂಟೆ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಸಜಿಪಮುನ್ನೂರು ಗ್ರಾಮದ ನಂದಾವರ ಗುಂಪುಮನೆ ಎಂಬಲ್ಲಿ ವಾಸ್ತವ್ಯವಿರುವ ಮಹಮ್ಮದ್ ಎಂಬವರ ಮನೆಗೆ ಗುಡ್ಡ ಜರಿದುಬಿದ್ದಿದೆ. ಮಣ್ಣಿನಡಿ ಮಹಮ್ಮದ್, ಅವರ ಪತ್ನಿ ಝರೀನಾ ಮತ್ತು ಮಗಳು ಸಫಾ ಸಿಲುಕಿದ್ದರು.
ಕೂಡಲೇ ಪಕ್ಕದವರು ಸಂಬಂಧಪಟ್ಟವರಿಗೆ ತಿಳಿಸಿದ್ದು, ರಕ್ಷಣಾ ಕಾರ್ಯ ಆರಂಭಗೊಂಡಿತ್ತು. ಸ್ಥಳಕ್ಕೆ ಎನ್.ಡಿ.ಆರ್.ಎಫ್, ಪೊಲೀಸ್, ಸಿ.ಆರ್.ಎಫ್. , ಅಗ್ನಿಶಾಮಕ ತಂಡ ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಆರೋಗ್ಯ ಇಲಾಖೆ ಸಿಬಂದಿ, ಆಂಬುಲೆನ್ಸ್ ಜೊತೆಗೆ ಹಾಜರಿದ್ದು, ಪೂರಕ ವ್ಯವಸ್ಥೆ ಕಲ್ಪಿಸಿದ್ದಾರೆ. ಬೆಳಗ್ಗೆ 8 ಗಂಟೆವರೆಗೆ ರಕ್ಷಣಾ ಕಾರ್ಯಾಚರಣೆ ನಡೆದಿದ್ದು, ಇವರಲ್ಲಿ ಮಹಮ್ಮದ್ ಮತ್ತು ಸಫಾ ಅವರನ್ನು ಸುರಕ್ಷಿತವಾಗಿ ಹೊರಕ್ಕೆ ತರಲಾಗಿದೆ. ಆದರೆ ಝರೀನಾ ಅವರು ಮಣ್ಣಿನಡಿ ಸಿಲುಕಿದ್ದು ಅವರನ್ನು ಹೊರಕ್ಕೆ ತಂದು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಆದರೆ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಮಣ್ಣಿನಡಿಯೇ ಪ್ರಾಣ ಹೋಗಿರಬಹುದು ಎಂದು ಅಂದಾಜಿಸಲಾಗಿದೆ. ಬಂಟ್ವಾಳ ತಹಸೀಲ್ದಾರ್ ಎಸ್.ಬಿ.ಕೂಡಲಗಿ, ಕಂದಾಯಇಲಾಖೆ ಆರ್.ಐ. ಜನಾರ್ದನ ಸಹಿತ ವಿವಿಧ ಇಲಾಖಾಧಿಕಾರಿಗಳು ಅಲ್ಲಿ ಹಾಜರಿದ್ದರು. ಸ್ಥಳಕ್ಕೆ ಜಿಲ್ಲಾ ಮಟ್ಟದ ಉನ್ನತ ಅಧಿಕಾರಿಗಳು ಪರಿಶೀಲನೆ ನಡೆಸುವ ಸಾಧ್ಯತೆ ಇದೆ.