ಬಂಟ್ವಾಳ: ಸೇವೆ ಮೂಲಕ ದಾರಿ ತೋರಿಸುವ ಕಾರ್ಯ ಆಗಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಆಗಸ್ಟ್ 8 ರಂದು ನಡೆಯಲಿರುವ ಒಡಿಯೂರು ಶ್ರೀಗಳ ಜನ್ಮದಿನೋತ್ಸವ-ಗ್ರಾಮೋತ್ಸವ ೨೦೨೩ ಪ್ರಯುಕ್ತ ಸಮಾಲೋಚನೆ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ವ್ಯಕ್ತಿ ಮತ್ತು ಸಂಘಟನೆಯಲ್ಲಿ ಧರ್ಮ ಶ್ರದ್ಧೆ ಇದ್ದಾಗ ಪ್ರತಿಯೊಂದು ಕಾರ್ಯವೂ ಯಶಸ್ವಿಯಾಗುತ್ತದೆ. ತ್ಯಾಗಪೂರ್ಣ ಸೇವೆ ಆಗಬೇಕು. ಸೇವೆ ಎಂಬುದು ಒಂದು ವೃತ್ತಿ, ಅದು ಕರ್ತವ್ಯ ಎಂಬ ಭಾವನೆ ನಮ್ಮಲ್ಲಿರಬೇಕು. ಸೇವೆ ಚಟುವಟಿಕೆ ನಿರಂತರ ಇರಬೇಕು. ಸೇವೆ ಮೂಲಕ ಜನರ ಮನಸ್ಸು ಗೆಲ್ಲುವ ಕೆಲಸ ಆಗಬೇಕು. ಹುಟ್ಟು ಹಬ್ಬದ ಉದ್ದೇಶ ಸಮಾಜ ಅಭಿವೃದ್ಧಿಯಾಗಿದ್ದು, ಸೇವೆಗಳು ಸಮಾಜಮುಖಿಯಾಗಬೇಕು. ಶಿಸ್ತು ಬದ್ಧವಾದ ಕಾರ್ಯಕ್ರಮ ಆಗಬೇಕು. ಪ್ರಕೃತಿ ಉಳಿಸುವ ಕಾರ್ಯದಲ್ಲಿ ಯುವ ಶಕ್ತಿ ಮುಂದೆ ಬರಬೇಕು ಎಂದರು.
ಒಡಿಯೂರು ಶ್ರೀಗಳ ಜನ್ಮದಿನೋತ್ಸವ-ಗ್ರಾಮೋತ್ಸವ 2023ರ ಸಮಿತಿ ಅಧ್ಯಕ್ಷರಾಗಿ ಗುಜರಾತ್ ಉದ್ಯಮಿ ಶಶಿಧರ ಬಿ ಶೆಟ್ಟಿ ಬರೋಡ ಅವರನ್ನು ಆಯ್ಕೆ ಮಾಡಲಾಯಿತು. ಸಾಧ್ವೀ ಮಾತನಾನಂದ ಮಯೀ ದಿವ್ಯ ಸಾನಿಧ್ಯ ವಹಿಸಿದ್ದರು.
ಗ್ರಾಮೋತ್ಸವ ಸಮಿತಿ ಮಾಜಿ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ, ಒಡಿಯೂರು ವಿವಿಧೋದ್ಧೇಸ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ರೈ, ಉಪಾಧ್ಯಕ್ಷ ಪಿ ಲಿಂಗಪ್ಪ ಗೌಡ, ಒಡಿಯೂರು ಗುರುದೇವ ಸೇವಾ ಬಳಗದ ಅಧ್ಯಕ್ಷ ಎ ಅಶೋಕ್ ಕುಮಾರ್ ಬಿಜೈ, ನವನೀತ್ ಶೆಟ್ಟಿ ಕದ್ರಿ, ಒಡಿಯೂರು ಗ್ರಾಮವಿಕಾಸ ಯೋಜನೆಯ ನಿರ್ದೇಶಕ ಕಿರಣ್ ಉರ್ವ, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಅಧ್ಯಕ್ಷೆ ಸರ್ವಾಣಿ ಪಿ ಶೆಟ್ಟಿ ಉಪಸ್ಥಿತರಿದ್ದರು. ತುಳು ಕೂಟದ ಅಧ್ಯಕ್ಷ ಯಶವಂತ ವಿಟ್ಲ ಸ್ವಾಗತಿಸಿ, ನಿರೂಪಿಸಿದರು. ಗಣಪತಿ ಭಟ್ ಸೇರಾಜೆ ವಂದಿಸಿದರು.