ದಕ್ಷಿಣ ಕನ್ನಡ ಜಿಲ್ಲೆಯ ಇತರ ಭಾಗಗಳಲ್ಲಿ ಮಳೆಯಾಗಿರುವಂತೆಯೇ ಬಂಟ್ವಾಳ ತಾಲೂಕಿನಲ್ಲಿಯೂ ಶನಿವಾರ ಮಳೆಯಾಗಿದೆ. ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣವಿದ್ದು, ಆಗಾಗ್ಗೆ ಮಳೆ ಧಾರಾಕಾರವಾಗಿ ಸುರಿಯಿತು. ಇದರಿಂದಾಗಿ ಬಿಸಿಲ ಬೇಗೆಗೆ ಬಸವಳಿದಿದ್ದ ಜನತೆಗೆ ಮಳೆ ತಂಪೆರೆದಂತಾಗಿದೆ. ವಾಡಿಕೆಯ ಮುಂಗಾರು ಕೇರಳ ಪ್ರವೇಶವಾಗಿದ್ದು, ಅದರೊಂದಿಗೆ ಚಂಡಮಾರುತದ ಪ್ರಭಾವವೂ ಇರುವ ಕಾರಣ ಈಗ ಮಳೆಯಾಗುತ್ತಿದ್ದು, ಕಚೇರಿ, ಶಾಲೆ, ಕಾಲೇಜುಗಳಿಗೆ ತೆರಳುವವರು ಮೊದಲೇ ಸಿದ್ಧರಾಗಿದ್ದರು. ಬಸ್ ನಿಲ್ದಾಣ ಸಹಿತ ಹಲವೆಡೆ ಹೂಳೆತ್ತದ ಕಾರಣ ರಸ್ತೆಯಲ್ಲೇ ನೀರು ನಿಂತ ದೃಶ್ಯಗಳು ಕಂಡುಬಂದವು. ಇನ್ನು ಬಿ.ಸಿ.ರೋಡ್ ನಲ್ಲಿ ಮಂಗಳೂರಿಗೆ ತೆರಳುವ ಪ್ರಯಾಣಿಕರು ಎಂದಿನಂತೆಯೇ ನೀರಿನ ಮಧ್ಯೆ ನಿಂತರೆ, ದಶಕಗಳಿಂದ ಮಳೆಗಾಲದಲ್ಲಿ ನೀರು ನಿಲ್ಲುವ ಜಾಗವಾಗಿ ಪ್ರಸಿದ್ಧಿ ಪಡೆದಿದ್ದ ಬಿ.ಸಿ.ರೋಡಿನ ಭೂ ಅಭಿವೃದ್ಧಿ ಬ್ಯಾಂಕ್ ಕಟ್ಟಡದ ಮುಂಭಾಗದ ರಸ್ತೆ ಕಾಂಕ್ರೀಟ್ ಆಗಿ ಬದಲಾದರೂ ನೀರು ಹರಿದುಹೋಗಲು ದಾರಿ ಇಲ್ಲದೆ ರಸ್ತೆಯಲ್ಲೇ ನೀರು ನಿಂತಿತ್ತು.