ಬಂಟ್ವಾಳ: ರೈತಪರ ನಿರ್ಧಾರಗಳನ್ನು ಕೈಗೊಳ್ಳುವ ಜಾತ್ಯಾತೀತ ಪಕ್ಷಗಳಿಗೆ ಬೆಂಬಲ ನೀಡಲು ರೈತಸಂಘ ಹಾಗೂ ಕಾರ್ಮಿಕ ಸಂಘಗಳು ನಿರ್ಧರಿಸಿವೆ. ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತಸಂಘದ ತಾಲೂಕು ಅಧ್ಯಕ್ಷ ಪ್ರೇಮನಾಥ ಶೆಟ್ಟಿ ಬಾಳ್ತಿಲ, ಬಿಜೆಪಿಗೆ ಬೆಂಬಲ ನೀಡದೇ ಇರಲು ನಿರ್ಧರಿಸಲಾಗಿದ್ದು, ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್, ಜೆಡಿಎಸ್ ರೈತಪರವಾಗಿದ್ದರೆ, ಬಿಜೆಪಿ ರೈತವಿರೋಧಿಯಾಗಿದೆ. ರಸಗೊಬ್ಬರ ಬೆಲೆ ಏರಿಕೆಯೇ ಮೊದಲಾದ ರೈತವಿರೋಧಿ ನೀತಿಯನ್ನು ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅನುಸರಿಸುತ್ತಿದ್ದು, 400 ಕೆವಿ ವಿದ್ಯುತ್ ಪ್ರಸರಣ ಲೈನ್ ನಲ್ಲಿ ರೈತರ ಜಮೀನಿಗೆ ತೊಂದರೆಯಾಗುವ ವಿಚಾರದ ಕುರಿತು ಆಳುವ ಪಕ್ಷದ ಜನಪ್ರತಿನಿಧಿಗಳು ಸಮರ್ಪಕ ಉತ್ತರ ನೀಡಿಲ್ಲ ಎಂದರು. ಆಯಾ ಕ್ಷೇತ್ರಗಳಲ್ಲಿ ಗೆಲ್ಲುವ ಸಾಮರ್ಥ್ಯವಿರುವ ಬಿಜೆಪಿಯೇತರ ಪಕ್ಷಗಳಿಗೆ ಬೆಂಬಲ ನೀಡುವುದಾಗಿ ಅವರು ಈ ಸಂದರ್ಭ ತಿಳಿಸಿದರು. ಈ ಸಂದರ್ಭ ರೈತಸಂಘದ ಶಾಹುಲ್ ಹಮೀದ್ ಕನ್ಯಾನ, ಕಾರ್ಮಿಕ ಮುಖಂಡ ರಾಮಣ್ಣ ವಿಟ್ಲ, ನ್ಯಾಯವಾದಿ ತುಳಸೀದಾಸ್ ವಿಟ್ಲ ಮೊದಲಾದವರು ಉಪಸ್ಥಿತರಿದ್ದರು.