ಬಜರಂಗದಳವನ್ನು ಬ್ಯಾನ್ ಮಾಡಲೇನಾದರೂ ಹೊರಟರೆ, ಜನರು ಖಂಡಿತಾ ಸಹಿಸೋದಿಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಂಟ್ವಾಳದಲ್ಲಿ ಹೇಳಿದ್ದಾರೆ. ಶನಿವಾರ ಸಂಜೆ ಬಂಟ್ವಾಳಕ್ಕೆ ಆಗಮಿಸಿ ಭರ್ಜರಿ ರೋಡ್ ಶೋ ನಡೆಸಿದರು. ಬಂಟ್ವಾಳದ ಬಸ್ತಿಪಡ್ಪು ಎಂಬಲ್ಲಿ ಹೆಲಿಕಾಪ್ಟರ್ ನಲ್ಲಿ ಆಗಮಿಸಿದ ಯೋಗಿ ಆದಿತ್ಯನಾಥ್, ಬಳಿಕ ಬಿ.ಸಿ.ರೋಡಿನ ಪೊಳಲಿ ದ್ವಾರದಿಂದ ಬಸ್ ನಿಲ್ದಾಣದವರೆಗೆ ನಡೆಸಿದ ರೋಡ್ ಶೋ ಬಳಿಕ ಸೇರಿದ್ದ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಸ್ವಾಗತಿಸಿ, ಕಂಚಿನ ಹನುಮಂತನ ಪ್ರತಿಮೆಯನ್ನು ನೆನಪಿನ ಕಾಣಿಕೆಯನ್ನಾಗಿ ನೀಡಿದರು. ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ ಅವರೊಂದಿಗೆ ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ರೋಡ್ ಶೋ ಗೆ ಬಿ.ಸಿ.ರೋಡಿನ ಕೈಕಂಬ ಪೊಳಲಿ ದ್ವಾರದೆಡೆಗೆ ಸಾಗಿದರು. ಬಿಜೆಪಿಯ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ ಸಹಿತ ಪಕ್ಷದ ಜಿಲ್ಲೆ, ತಾಲೂಕು ಮಟ್ಟದ ನಾನಾ ಪದಾಧಿಕಾರಿಗಳು, ಸ್ಥಳೀಯ ಪ್ರಮುಖರು, ಪುರಸಭಾ ಸದಸ್ಯರು, ಪಂಚಾಯಿತಿ ಸದಸ್ಯರು, ಅಭಿಮಾನಿಗಳು ಯೋಗಿ ಆದಿತ್ಯನಾಥ್ ಜೊತೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು,