ಜಿಲ್ಲಾ ಸುದ್ದಿ

ಮಂಗಳೂರಲ್ಲಿ ನಾಳೆಯಿಂದಲೇ ನೀರಿನ ರೇಷನಿಂಗ್: ಜಿಲ್ಲಾಧಿಕಾರಿ ನೇತೃತ್ವದ ಸಭೆಯಲ್ಲಿ ಹಲವು ಮಹತ್ವದ ನಿರ್ಣಯ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ಜಿಲ್ಲಾಡಳಿತ ಆದ್ಯತೆ ನೀಡುತ್ತಿದೆ ಎಂದು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಕರೆದ ಸಭೆಯಲ್ಲಿ ಹೇಳಿರುವ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್, ಹಲವು ಸೂಚನೆಗಳನ್ನು ನೀಡಿದ್ದಾರೆ.

ದಿನಾಂಕ 05.05.2023 ರಂದು ಮಂಗಳೂರು ನಗರ ಉತ್ತರಕ್ಕೆ, ದಿನಾಂಕ 06.05.2023 ರಂದು ಮಂಗಳೂರು ನಗರ ದಕ್ಷಿಣ, ನಂತರ ಕ್ರಮಾನುಗತವಾಗಿ ಮೇಲೆ ತಿಳಿಸಿದಂತೆ ನೀರು ಪೂರೈಕೆ ಮಾಡಲು ನಿರ್ಧರಿಸಲಾಗಿರುತ್ತದೆ.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೇ. 5ರಿಂದಲೇ ರೇಷನಿಂಗ್ ಮೂಲಕ ನೀರು ಸರಬರಾಜು ಮಾಡಲು ನಿರ್ಧರಿಸಲಾಗಿದೆ. ದ.ಕ.ಜಿಲ್ಲಾಧಿಕಾರಿ ಮೀಟಿಂಗ್ ನ  ವಿವರಗಳಿಗೆ ಮುಂದೆ ಓದಿರಿ.

ಜಿಲ್ಲೆಯಾದ್ಯಂತ ಪ್ರಸಕ್ತ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮರ್ಪಕ ಪೂರಕೆಗೆ ಜಿಲ್ಲಾಡಳಿತ ಪ್ರಥಮ ಆದ್ಯತೆ ನೀಡಿದ್ದು, ಕುಡಿಯುವ ನೀರು ಹೊರತುಪಡಿಸಿ ಇತರೆ ಯಾವುದೇ ರೀತಿಯ ಚಟುವಟಿಕೆಗಳಿಗೆ ಅವಕಾಶವಿಲ್ಲವೆಂದು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ಸ್ಪಷ್ಟಪಡಿಸಿದರು.
ಮಂಗಳೂರಿನ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಕುಡಿಯುವ ನೀರಿನ ಸಮರ್ಪಕ ಪೂರೈಕೆ ಕುರಿತಂತೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೃಷಿ ಕೈಗಾರಿಕೆಗೆ ಇಲ್ಲ:

ಜಿಲ್ಲೆಯಲ್ಲಿ ಈ ರೀತಿಯ ಸಮಸ್ಯೆ 2019 ರಲ್ಲಿ ಕಂಡು ಬಂದಿತ್ತು, ಇದೀಗ ಕಂಡುಬರುತ್ತಿರುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಲಾಗುವುದು, ಈ ದಿಸೆಯಲ್ಲಿ ಜಿಲ್ಲಾದ್ಯಂತ ಕುಡಿಯುವ ನೀರು ಹೊರತುಪಡಿಸಿ ಕೃಷಿ ಹಾಗೂ ಕೈಗಾರಿಕಾ ಚಟುವಟಿಕೆಗಳಿಗೆ ನೀರು ಪೂರೈಕೆ ಮಾಡುವ ವಿದ್ಯುಚ್ಛಕ್ತಿ ಸಂಪರ್ಕ ಕಡಿತಗೊಳಿಸುವಂತೆ ಮೆಸ್ಕಾಂನವರಿಗೆ ಸೂಚಿಸಿದ್ದಾರೆ.

ಮಾರ್ಚ್,  ಏಪ್ರಿಲ್‍ನಲ್ಲಿ ಮಳೆ ಬಂದಿಲ್ಲ, ಮುಂದಿನ ದಿನಗಳಲ್ಲಿ ಮಳೆಯಾಗದಿದ್ದರೆ ನೀರು ಪೂರೈಕೆಯಲ್ಲಿ ರೇಷನಿಂಗ್ ವ್ಯವಸ್ಥೆ ಅನಿವಾರ್ಯವಾಗಲಿದೆ.  ಹಾಗಾಗಿ ಕೆಲವು ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ, ಕುಡಿಯುವ ನೀರು ಹೊರತುಪಡಿಸಿ ಬೇರೆ ಉದ್ದೇಶಗಳಿಗೆ ಬಳಸುವಂತಿಲ್ಲ, ಸುರತ್ಕಲ್ ಹಾಗೂ ಮಂಗಳೂರು ನಗರದ ವ್ಯಾಪ್ತಿಯಲ್ಲಿ ಪರ್ಯಾಯ ದಿನಗಳಲ್ಲಿ ನೀರು ಪೂರೈಸುವಂತೆ ತಿಳಿಸಿದ ಅವರು, ಈ ಸಂದರ್ಭ ಪೈಪ್ಲೈನ್ ಹಾನಿಯಾಗಿರುವುದು ಕಂಡುಬಂದಲ್ಲಿ ಕೂಡಲೇ ದುರಸ್ತಿ ಪಡಿಸಬೇಕು ಎಲ್ಲಿಯೂ ನೀರು ಪೋಲಾಗದಂತೆ ಎಚ್ಚರ ವಹಿಸಬೇಕು ಎಂದರು.

ನೀರಿನ ಮಟ್ಟ 4.34 ಮೀಟರ್:
ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಚನ್ನಬಸಪ್ಪ ಮಾತನಾಡಿ, ತುಂಬೆ ವೆಂಟೆಡ್ ಡ್ಯಾಂನಲ್ಲಿ ಇದೀಗ ನೀರಿನ ಮಟ್ಟವು 4.34 ಮೀ ಇದೆ. ಪ್ರಸ್ತುತ ಲಭ್ಯವಿರುವ ನೀರಿನ ಮಟ್ಟದನ್ವಯ ಮುಂದಿನ 20 ದಿನಗಳಿಗೆ ನೀರು ಸರಬರಾಜು ಮಾಡಬಹುದಾಗಿದ್ದು, ಮೇ ಅಂತ್ಯದವರೆಗೆ ಮಳೆ ಬಾರದೇ ಇದ್ದಲ್ಲಿ, ನೀರು ಸರಬರಾಜಿನಲ್ಲಿ ವ್ಯತ್ಯಯವಾಗುವುದರಿಂದ ರೇಷನಿಂಗ್ ಮೂಲಕ ಸರಬರಾಜು ಮಾಡಬೇಕಾದ ಅನಿವಾರ್ಯತೆ ಎದುರಾಗಲಿದೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರು ಮಾತನಾಡಿ, ಮಾಣಿ ಮತ್ತು ಸರಪಾಡಿ ಗ್ರಾಮಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿದ್ದು, ಎ.ಎಂ.ಆರ್, ಡ್ಯಾಂನ ನೀರನ್ನು ಅಭಾರವನ್ನಾಗಿರಿಸಿ ಗ್ರಾಮೀಣ ಪ್ರದೇಶದ ಸಾರ್ವಜನಿಕರಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಎ.ಎಂ.ಆರ್. ಡ್ಯಾಂ ನ  ಡೌನ್‍ಸ್ಟ್ರೀಮ್ ನಲ್ಲಿ ಲಭ್ಯವಿರುವ ನೀರನ್ನು ಪಂಪ್ ಮೂಲಕ ಲಿಫ್ಟ್‍ಮಾಡಿ ಪರ್ಯಾಯ ದಿನಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ.  ನಾಲ್ಕು ಎಂ.ಎಲ್.ಡಿಯಷ್ಟು ನೀರಿನ ಅವಶ್ಯಕತೆ ಇದ್ದು, ಪ್ರಸ್ತುತ ನೀರಿನ ಲಭ್ಯತೆಯನುಸಾರ ಪರ್ಯಾಯ ದಿನಗಳಿಗೆ 2 ಎಂ.ಎಲ್.ಡಿಯನ್ನು ನೀರನ್ನು ಪಂಪ್ ಮಾಡಲಾಗುತ್ತಿದೆ. ಉಳ್ಳಾಲ ತಾಲೂಕಿನ ನರಿಂಗಾನ, ಬಾಳಪುಣೆ, ಕೊಣಾಜೆ, ತಲಪಾಡಿ ಪ್ರದೇಶಗಳಲ್ಲಿ ನೀರಿನ ಮೂಲಗಳು ಇರುವುದಿಲ್ಲ. ಈ ಪ್ರದೇಶಗಳಲ್ಲಿ ಬೋರ್‍ವೆಲ್‍ಗಳನ್ನು ಕೊರೆಯಲಾಗಿದ್ದರೂ ನೀರು ಸಂಪೂರ್ಣವಾಗಿ ಬತ್ತಿ ಹೋಗಿದ್ದು, ಪ್ರಸ್ತುತ 58 ಬೋರ್‍ವೆಲ್‍ಗಳನ್ನು ಡೀಪೆನ್ನಿಂಗ್, ಫ್ಲಷಿಂಗ್ ಮಾಡಲಾಗಿರುತ್ತದೆ. ಬೋರ್ ವೆಲ್‍ಗಳ ಡೀಪೆನ್ನಿಂಗ್ ಮತು ಫ್ಲಷಿಂಗ್ ಕಾರ್ಯಗಳಿಗೆ ತಗುಲುವ ವೆಚ್ಚವನ್ನು 15ನೇ ಹಣಕಾಸು ನಿಧಿಯಿಂದ ಭರಿಸಲಾಗುತ್ತಿದೆ. ಪ್ರಸ್ತುತ ಎ.ಎಂ.ಆರ್.ಡ್ಯಾಂ ನಲ್ಲಿ ಲಭ್ಯವಿರುವ ನೀರಿನ (13.20ಮೀ) ಮಟ್ಟದಾನುಸಾರ ಮುಂದಿನ 15 ರಿಂದ 20  ದಿನಗಳಿಗೆ ನೀರು ಸರಬರಾಜು ಮಾಡಬಹುದಾಗಿದೆ ಎಂದರು.

ಮೆಸ್ಕಾಂನಿಂದ ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿ ಮಾತನಾಡಿ, ನದಿಯ ಇಕ್ಕೆಲಗಳಲ್ಲಿ ಆರ್.ಆರ್ ನಂಬರ್ ಇರುವ 28 ಪಂಪ್‍ಸೆಟ್‍ಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ, ಯಾವುದೇ ಅನಧಿಕೃತ ಪ್ರಕರಣಗಳು ಕಂಡುಬಂದಿಲ್ಲ ಎಂದರು.
ಎಂ.ಆರ್.ಪಿ.ಎಲ್. ಸಂಸ್ಥೆಯು, ಪ್ರಸ್ತುತ ಎ.ಎಂ.ಆರ್, ಡ್ಯಾಂ ನಿಂದ ಶೇ.20 ನೀರನ್ನು ಕುಡಿಯುವ ಉದ್ದೇಶಕ್ಕೆ ಲಿಫ್ಟ್ ಮಾಡುತ್ತಿರುವುದಾಗಿ ಹಾಗೂ ಎಸ್.ಇ.ಝಡ್. ನವರು ಎ.ಎಂ.ಆರ್.ಡ್ಯಾಂ ನಿಂದ ನೀರೆತ್ತುವುದನ್ನು ಸಂಪೂರ್ಣ ಸ್ಥಗಿತಗೊಳಿಸಿರುವದಾಗಿ ಸಂಸ್ಥೆಯ ಪ್ರತಿನಿಧಿಗಳು ಸಭೆಗೆ ತಿಳಿಸಿದರು.
ಸಭೆಯಲ್ಲಿ ಚರ್ಚೆಯಾಗಿ ಕೈಗೊಂಡ ಪ್ರಮುಖ ನಿರ್ಣಯಗಳು:

  1. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೇ.5ರಿಂದಲೇ ರೇಷನಿಂಗ್ ಮೂಲಕ ನೀರು ಸರಬರಾಜು ಮಾಡಲು ನಿರ್ಧರಿಸಲಾಯಿತು.
  2. ಮಂಗಳೂರು ನಗರ ಪ್ರದೇಶಕ್ಕೆ ಮತ್ತು ಸುರತ್ಕಲ್ ಪ್ರದೇಶಕ್ಕೆ ಪರ್ಯಾಯ ದಿನಗಳಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ನಿರ್ಣಯ.
  3. ಅಧಿಕೃತ/ಅನಧಿಕೃತವಾಗಿ ನಡೆಯುತ್ತಿರುವ ಕಾರು, ದ್ವಿಚಕ್ರ, ಬಸ್, ರಿಕ್ಷಾ, ಲಾರಿ ಸರ್ವಿಸ್ ಸ್ಟೇಷನ್, ವಾಕಿಂಗ್‍ಷೋರೂಂಗಳಿಗೆ ನೀರು ಸರಬರಾಜನ್ನು ಕೂಡಲೇ ಸ್ಥಗಿತಗೊಳಿಸಲು ನಿರ್ಣಯಿಸಲಾಯಿತು
  4. ಕಟ್ಟಡ ಕಾಮಗಾರಿಗಳಿಗೆ (ಮನೆ ವಾಣಿಜ್ಯ ಸಂಕೀರ್ಣ/ಅಪಾರ್ಟ್ ಮೆಂಟ್ಸ್) ನೀರು ಸರಬರಾಜು ಮಾಡುವಂತಿಲ್ಲ.
  5. ತುಂಬೆಯಿಂದ ಮಂಗಳೂರು ನಗರಕ್ಕೆ ಬರುವ ಮಾರ್ಗದಲ್ಲಿ ಇರುವಂತಹ ವಾಣಿಜ್ಯ ಸಂಕೀರ್ಣಗಳಿಗೆ ನೀರು ಸರಬರಾಜು ಸ್ಥಗಿತಗೊಳಿಸುವುದು.
  6. ನೀರು ಸರಬರಾಜು ಮಾಡುವಾಗ ಪೈಪ್ ಲೈನ್‍ಗಳಿಗೆ ಯಾವುದೇರೀತ್ಯಾ ಹಾನಿಯಾಗದಂತೆ ಎಚ್ಚರಿಕೆ ವಹಿಸಲು ಮಹಾನಗರ ಪಾಲಿಕೆಗೆ ಸೂಚಿಸಲಾಯಿತು.
  7. ಜಿಲ್ಲೆಯಲ್ಲಿರುವ ಜಲಾಶಯ, ಡ್ಯಾಂ ಮತ್ತು ಮುಂತಾದ ನೀರಿನ ಮೂಲಗಳಲ್ಲಿ ಲಭ್ಯವಿರುವ ನೀರನ್ನು ಕೃಷಿ/ತೋಟಗಾರಿಕಾ ಬೆಳೆಗಳ ಉದ್ದೇಶಕ್ಕಾಗಿ ಬಳಸದಂತೆ ನಿರ್ಧರಿಸಲಾಯಿತು

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ